ADVERTISEMENT

ಅಮಾನತುಗೊಂಡ ಕಾನ್‌ಸ್ಟೆಬಲ್ ಸಲೀಂ ಪಾಷಾಗೆ CM ಪದಕ: ಸರ್ಕಾರದ ವಿರುದ್ಧ ಯತ್ನಾಳ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2024, 7:16 IST
Last Updated 16 ಆಗಸ್ಟ್ 2024, 7:16 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬೆಂಗಳೂರು: ಕರ್ತವ್ಯ ಲೋಪದ ಆರೋಪದಲ್ಲಿ ಅಮಾನತುಗೊಂಡಿರುವ ಸಿಸಿಬಿ ಘಟಕದ ಹೆಡ್‌ ಕಾನ್‌ಸ್ಟೆಬಲ್ ಸಲೀಂ ಪಾಷಾ ಅವರನ್ನು ಪೊಲೀಸ್‌ ಇಲಾಖೆಯ 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಂಡಿಸಿದ್ದಾರೆ.

ಸಲೀಂ ಪಾಷಾಗೆ ಮುಖ್ಯಮಂತ್ರಿ ಪದಕ ಪ್ರಕಟಿಸುವ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೈಸೂರು ಸಿಸಿಬಿ ಘಟಕದ ಪೊಲೀಸ್ ಕಾನ್‌ಸ್ಟೆಬಲ್ ಸಲೀಂ ಪಾಷಾ ಅವರು ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳವು ಸೇರಿದಂತೆ ಅನೇಕ ಗಂಭೀರ ಆರೋಪಿಗಳನ್ನು ಎದುರಿಸುತ್ತಿದ್ದಾರೆ. ಆದರೆ, ಸಲೀಂ ಪಾಷಾಗೆ ಮುಖ್ಯಮಂತ್ರಿಗಳ ಪದಕ ನೀಡಿದ್ದೇಕೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು’ ಆಗ್ರಹಿಸಿದ್ದಾರೆ.

‘ಇಂತಹ ಆರೋಪ ಹೊತ್ತ ಪೊಲೀಸರಿಗೆ ಪದಕ ನೀಡಿದರೆ, ಕಷ್ಟಪಟ್ಟು ದುಡಿಯುತ್ತಿರುವ ನಿಷ್ಠಾವಂತ ಪೇದೆಗಳಿಗೆ, ಅಧಿಕಾರಗಳಿಗೆ ಮನೋಸ್ಥೈರ್ಯ ಏನಾಗಬೇಕೆಂದು ಯೋಚಿಸಿದ್ದೀರಾ? ನಿಮ್ಮ ಆಯ್ಕೆಯ ಮಾನದಂಡಗಳು ಏನೆಂಬುದನ್ನು ತಿಳಿಸಿ. ಕೂಡಲೇ ಪದಕವನ್ನು ವಾಪಾಸ್ ಪಡೆಯಬೇಕು. ಜತೆಗೆ, ಸಲೀಂ ಪಾಷಾ ವಿರುದ್ಧ ತನಿಖೆಯನ್ನು ಚುರುಕುಗೊಳಿಸಿ’ ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಏನಿದು ಪ್ರಕರಣ?

ಪೊಲೀಸ್‌ ಇಲಾಖೆಯ 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದವರ ಪಟ್ಟಿ ಬಿಡುಗಡೆಗೊಂಡಿದ್ದು, ಈಚೆಗೆ ಕರ್ತವ್ಯ ಲೋಪದ ಆರೋಪದಲ್ಲಿ ಅಮಾನತುಗೊಂಡಿರುವ ಸಿಸಿಬಿ ಘಟಕದ ಹೆಡ್‌ ಕಾನ್‌ಸ್ಟೆಬಲ್ ಪೇದೆ ಸಲೀಂ ಪಾಷಾ ಅವರಿಗೂ ಪದಕ ದೊರಕಿದೆ.

ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಹಾಗೂ ಗಾಂಜಾ ಪ್ರಕರಣಗಳಲ್ಲಿ ಆರೋಪಿಗಳು ಹಾಗೂ ಅವರ ಸಂಬಂಧಿಕರ ಜೊತೆಗೆ ಫೋನ್‌ ಮೂಲಕ ಸಂಪರ್ಕಿಸಿರುವುದು ಸಾಬೀತಾಗಿದ್ದು, ವಿಚಾರಣೆ ನಡೆಯುತ್ತಿರುವಂತೆಯೇ ರಾಜ್ಯ ಪೊಲೀಸ್‌ (ಶಿಸ್ತು ನಡಾವಳಿ) ಅನ್ವಯ ಜುಲೈ 12ರಂದು ಸಿಸಿಬಿ ಘಟಕದ ಕಾನ್‌ಸ್ಟೆಬಲ್ ಸಲೀಂ ಪಾಷಾ ಅವರನ್ನು ಅಮಾನತುಗೊಳಿಸಿ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ಆದೇಶಿಸಿದ್ದರು.

‘2022ರಲ್ಲಿ ಅಂದಿನ ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಶಿಫಾರಸು ಮಾಡಿದ್ದರು. ಆಗ ಪ್ರಶಸ್ತಿ ಸಿಕ್ಕಿರಲಿಲ್ಲ. 2023ರಲ್ಲೂ ನನ್ನ ಹೆಸರು ಸೂಚಿಸಿದ್ದು, ಪದಕ ದೊರೆತಿದೆ. ತಿಂಗಳ ಹಿಂದೆಯಷ್ಟೇ ಡಿಸಿಪಿ ಜಾಹ್ನವಿ ಅವರು ಸೂಚನೆ ಇಲ್ಲದೆ ನನ್ನನ್ನು ಅಮಾನತು ಮಾಡಿದ್ದಾರೆ’ ಎಂದು ಸಲೀಂ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.