ADVERTISEMENT

ಶೇ 80 ಕಮಿಷನ್‌ನ ‘ಪೇಡಿಸಿಎಂ’ ಸರ್ಕಾರ: ಯತ್ನಾಳ

‘ಗುತ್ತಿಗೆದಾರರು ಸಂಕಷ್ಟದಲ್ಲಿ, ಹೈಕೋರ್ಟ್‌ ಕಿವಿ ಹಿಂಡಿದರೂ ಬಿಲ್‌ ಪಾವತಿ ಆಗುತ್ತಿಲ್ಲ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 15:22 IST
Last Updated 8 ಡಿಸೆಂಬರ್ 2023, 15:22 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಧಾನಸಭೆ: ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಶೇ 80 ಕಮಿಷನ್‌ನ ‘ಪೇಡಿಸಿಎಂ’ ಸರ್ಕಾರವಾಗಿದೆ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಆರೋಪಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಮತ್ತು ಇತರ ಇಲಾಖೆಗಳ ಕಾಮಗಾರಿಗಳನ್ನು ನಡೆಸಿದ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡದ ಕಾರಣ ಗುತ್ತಿಗೆದಾರರು ಸಂಕಷ್ಟದಲ್ಲಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಗುತ್ತಿಗೆದಾರರು ತಮ್ಮ ಕೈಯಿಂದ ಹಣ ಹಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ಮಾಡಿರುವ ಕೆಲಸಕ್ಕೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಇದರ ಪರಿಣಾಮ ಗುತ್ತಿಗೆದಾರರು ಸುಮಾರು ₹1,200 ಕೋಟಿ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದಾರೆ. ಇವರಿಗೆಲ್ಲ ನೋಟಿಸ್ ಜಾರಿಯಾಗಿದೆ. ಇವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಈ ಕುರಿತು ಸರ್ಕಾರಕ್ಕೆ ಹೈಕೋರ್ಟ್‌ ಎಚ್ಚರಿಕೆ ನೀಡಿ ಬಿಲ್‌ ಪಾವತಿಗೆ ಸೂಚಿಸಿದೆ. ಆದರೆ, ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.

ADVERTISEMENT

‘ಈ ಸರ್ಕಾರ ಹೊರ ರಾಜ್ಯದ ಗುತ್ತಿಗೆದಾರರಿಗೆ ಮಣೆ ಹಾಕುತ್ತಿದೆ. ಹೊರ ರಾಜ್ಯಗಳ ಗುತ್ತಿಗೆದಾರರಿಂದ ಶೇ 80ರಷ್ಟು ಕಮಿಷನ್‌ ಪಡೆದು ಅವರಿಗೆ ಹಣ ಬಿಡುಗಡೆ ಮಾಡುತ್ತಿದೆ. ಹಿಂದೆ ನಮ್ಮ ಸರ್ಕಾರವನ್ನು ಶೇ40 ರ ಸರ್ಕಾರ ಎಂದು ಆರೋಪ ಮಾಡಿದ್ದರು. ಈಗ ಇವರ ಸರ್ಕಾರ ಶೇ 80ರಷ್ಟು ಕಮಿಷನ್‌ ಸರ್ಕಾರ. ಡಿಸಿಎಂಗೆ ಕಮಿಷನ್‌ ಕೊಟ್ಟರಷ್ಟೇ ಹಣ ಬಿಡುಗಡೆ ಯಾಗುತ್ತದೆ’ ಎಂದು ಯತ್ನಾಳ ಹೇಳಿದಾಗ ಕಾಂಗ್ರೆಸ್‌ ಶಾಸಕರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು .

‘ಯತ್ನಾಳ ಅವರು ಶೂನ್ಯವೇಳೆಯನ್ನು ರಾಜಕೀಯ ಕಾರಣಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮನಸ್ಸಿಗೆ ತೋಚಿದಂತೆ ಮಾತನಾಡುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

‘ಯತ್ನಾಳ ಅವರು ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.