ಬೆಂಗಳೂರು: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಜೂನ್ 27 ರಂದು ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ನಡೆಸಲಾಗುವುದು’ ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
‘ಜೂನ್ 27ರ ಒಳಗೆ ಅಂತಿಮ ಮಾತುಕತೆಗೆ ಆಹ್ವಾನಿಸಿ ಸ್ಪಷ್ಟ ನಿಲುವು ಪ್ರಕಟಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಬಹಿರಂಗ ಪತ್ರ ಬರೆದಿದ್ದೇವೆ. ಇದು ನಮ್ಮ ಕೊನೆಯ ಪತ್ರ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸರ್ಕಾರಕ್ಕೆ ಹಲವು ಬಾರಿ ಗಡುವು ನೀಡಿದ್ದರೂ ಬೇಡಿಕೆಗೆ ಸ್ಪಂದಿಸಿಲ್ಲ. ನುಡಿದಂತೆಯೂ ನಡೆಯುತ್ತಿಲ್ಲ. ಒಂದು ವರ್ಷ ಮೂರು ತಿಂಗಳಾದರೂ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆದುಕೊಂಡಿಲ್ಲ. ಮುಖ್ಯಮಂತ್ರಿ ಅವರು ತಮ್ಮ ಅಧಿಕಾರ ಬಳಸಿ ತಕ್ಷಣವೇ ವರದಿ ಪಡೆದುಕೊಳ್ಳಬಹುದು. ಆದರೆ, ಅವರು ಮೌನವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಅವರಿಗೆ ಸಮಾಜದ ಋಣಭಾರ ಇದೆ ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.
‘ಶಿಗ್ಗಾವಿಯಲ್ಲಿ ನಡೆಯುವ ಧರಣಿಯಲ್ಲಿ ಸಮುದಾಯದ 30 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ನಂತರ ಅಕ್ಟೋಬರ್‌ನಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೇರಿಸಿ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.