ಬಾಗಲಕೋಟೆ: ‘ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಪಾದಯಾತ್ರೆ ಬೆಂಗಳೂರು ಮುಟ್ಟುವುದರೊಳಗೆ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ದೆಹಲಿಯಿಂದಲೇ ಸಿಗಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಣೆ ಮಾಡಲಿದ್ದಾರೆ’ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿಗೆ ಆಗ್ರಹಿಸಿ ಗುರುವಾರ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಅವರು ಕೂಡಲಸಂಗಮದಿಂದ ಬೆಂಗಳೂರಿಗೆ ಆರಂಭಿಸಿದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಮಾಜದ ಈ ಹೋರಾಟವನ್ನು ವಿಫಲಗೊಳಿಸಲು ದೊಡ್ಡ ಷಡ್ಯಂತ್ರ ನಡೆದಿದೆ. ಆಸೆ–ಅಮಿಷಗಳಿಗೆ ನಾವು ಬಗ್ಗುವುದಿಲ್ಲ. ಯಾರನ್ನೋ ಸಿಎಂ ಮಾಡಲು ಈ ಹೋರಾಟ ಮಾಡುತ್ತಿಲ್ಲ. ಬದಲಿಗೆ ಸಮಾಜದ ಭವಿಷ್ಯ ನಿರ್ಮಾಣ ಮಾಡಲು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದರು.
‘ವೀರಶೈವ ಲಿಂಗಾಯತ ಹೆಸರಿನಲ್ಲಿಮೇಲಿನವರನ್ನು (ಹೈಕಮಾಂಡ್) ಹೆದರಿಸಿ ಅಧಿಕಾರ ಉಳಿಸಿಕೊಳ್ಳಲು ಕೆಲವರು ಕೋಟಿಗಟ್ಟಲೇ ಹಣವನ್ನು ಮಠಗಳಿಗೆ ದೇಣಿಗೆ ಕೊಟ್ಟಿದ್ದಾರೆ’ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಯತ್ನಾಳ ಹರಿಹಾಯ್ದರು. ‘ಆ ಲೆಕ್ಕದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೂ ₹20 ಲಕ್ಷ ಕೊಡಲಾಗಿದೆ. ಅದನ್ನು ವಾಪಸ್ ಕೊಡಲು ಸ್ವಾಮೀಜಿ ತೀರ್ಮಾನಿಸಿದ್ದಾರೆ. ಆ ಮೊತ್ತವನ್ನು ಸಮಾಜದಿಂದ ನಾನೇ ಮಠಕ್ಕೆ ಕೊಡಿಸುವೆ’ ಎಂದರು.
ಕೂಡಲಸಂಗಮ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ನಮ್ಮ (ಪಂಚಮಸಾಲಿಗಳ) ಹೆಗಲ ಮೇಲೆ ಕೈ ಇಟ್ಟು, ನಿಗಮ ಮಂಡಳಿ ಸ್ಥಾನ ಕೊಟ್ಟು ಖುಷಿ ಪಡಿಸುವ ಕಾಲ ಈಗ ಇಲ್ಲ. ಬದಲಿಗೆ ಸಮಾಜದ ಯುವಜನರ ಭದ್ರ ಭವಿಷ್ಯಕ್ಕೆ ಮೀಸಲಾತಿ ಬೇಕಿದೆ. ಅದಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದರು.
‘ಸಚಿವ ಮುರುಗೇಶ ನಿರಾಣಿ ಅವರ ಕೈಗಾರಿಕೆ ಉದ್ಘಾಟಿಸಲು ಬಾಗಲಕೋಟೆ ಜಿಲ್ಲೆಗೆ ಜನವರಿ 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾಬರಲಿದ್ದಾರೆ. ಅವರನ್ನು ಭೇಟಿಯಾಗಿ ಮೀಸಲಾತಿಗೆ ಬೇಡಿಕೆ ಸಲ್ಲಿಸಲು ಶ್ರೀಮಠದಿಂದ ಜನಪ್ರತಿನಿಧಿಗಳ ನಿಯೋಗ ಕಳುಹಿಸಲಿದ್ದೇವೆ’ ಎಂದು ಹೇಳಿದರು.
ದೆಹಲಿ ಹೋರಾಟ ಶ್ರೀಮಂತರು, ದಲ್ಲಾಳಿಗಳದ್ದು: ಯತ್ನಾಳ ಆರೋಪ
‘ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರೈತರದ್ದಲ್ಲ. ಬದಲಿಗೆ ಶ್ರೀಮಂತರು ಹಾಗೂ ದಲ್ಲಾಳಿಗಳದ್ದಾಗಿದೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
‘ರೈತರು ಎಂದು ಹೇಳುತ್ತಾ ಹೋರಾಟಗಾರರು ಅಲ್ಲಿ ಮಸಾಜ್ ಪಾರ್ಲರ್ ಹಾಗೂ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಿದ್ದಾರೆ. ಖಲಿಸ್ತಾನ ಪ್ರತ್ಯೇಕವಾದಿಗಳು ಅವರಲ್ಲಿ ಸೇರಿದ್ದಾರೆ. ನಮಗೊಬ್ಬರು ಒಳ್ಳೆಯ ಪ್ರಧಾನಿ ಸಿಕ್ಕಿದ್ದಾರೆ. ರೈತರ ಪರ ಅವರು ತಂದಿರುವ ಒಳ್ಳೆಯ ಕಾನೂನುಗಳನ್ನು ವಿಫಲಗೊಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ’ ಎಂದರು.
‘ಪಂಚಮಸಾಲಿ ಸಮಾಜ 3ಬಿಗೆ ಸೇರಿಸಿದ್ದೇ ನಮ್ಮ ಸರ್ಕಾರ’
ದಾವಣಗೆರೆ: ‘ಜಾತಿ ಪಟ್ಟಿಯಲ್ಲಿ ಇರದ ಪಂಚಮಸಾಲಿ ಸಮಾಜವನ್ನು ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ 3ಬಿಗೆ ಸೇರಿಸಲಾಗಿತ್ತು. ಈ ಸಮಾಜದ ಜತೆಗೆ ಸದಾ ಇದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಗುರುವಾರ ನಡೆದ ಹರಜಾತ್ರಾ ಮಹೋತ್ಸವದ ಸ್ವಾವಲಂಬಿ ಸಮಾವೇಶದಲ್ಲಿ ಸಂಕ್ರಾಂತಿ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘3ಬಿಗೆ ಸೇರಿಸಲು ಮುರುಗೇಶ ನಿರಾಣಿ ಅವರ ಪ್ರಯತ್ನ ಪ್ರಮುಖ ಕಾರಣವಾಗಿತ್ತು. ನಾನು ಬೇರೆ ಅಲ್ಲ; ನೀವು ಬೇರೆ ಅಲ್ಲ’ ಎಂದು ಪಂಚಮಸಾಲಿ ಸಮಾಜದವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಹೇಳಿದರು. ಈ ಸಮುದಾಯದ ಪ್ರಮುಖ ಬೇಡಿಕೆಯಾಗಿರುವ 2ಎ ಪಟ್ಟಿಗೆ ಸೇರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಯಾವುದೇ ಪ್ರಸ್ತಾಪ ಮಾಡಲಿಲ್ಲ.
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ‘ಮುಖ್ಯಮಂತ್ರಿ ಅವರು ನುಡಿದಂತೆ ನಡೆಯುವವರು. ನಮ್ಮ ನಂಬಿಕೆಯನ್ನು ಎಂದೂ ಹುಸಿ ಮಾಡಿಲ್ಲ. ಅವರ ಜತೆಗೆ ನಮ್ಮ ಸಮಾಜ ಯಾವತ್ತೂ ಇರುತ್ತದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದು, ಲಿಂಗಾಯತ ಧರ್ಮದ ಉಳಿದ ಸಮಾಜಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ತರುವಲ್ಲಿ ಅವರು ಕೆಲಸ ಮಾಡುತ್ತಾರೆ’ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಎರಡು ದಿನಗಳ ಹರಜಾತ್ರೆ ಸಂಭ್ರಮದಿಂದ ಆರಂಭಗೊಂಡಿತು. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಮಂದಿ ಬಂದಿದ್ದರು. ತುಮಕೂರು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಹರದ್ವಾರವನ್ನು ಉದ್ಘಾಟಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಪಮುಖ್ಯಮಂತ್ರಿ ಡಾ.ಸಿ.ಎಸ್. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಮೂಲಭೂತ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ ಅವರೂ ಇದ್ದರು.
ಬಳಿಕ ಭೂತಪಸ್ವಿ ಸಮಾವೇಶ ನಡೆಯಿತು. ಜ.15ರಂದು ಬೆಳಿಗ್ಗೆ ಯುವರತ್ನ ಸಮಾವೇಶ ನಡೆಯಲಿದೆ. ಮಧ್ಯಾಹ್ನದ ಬಳಿಕ ವಚನಾನಂದ ಸ್ವಾಮೀಜಿ ಅವರ ತೃತೀಯ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ.
ಪಾದಯಾತ್ರೆ ಕೈಬಿಡಿ: ಸಚಿವ ನಿರಾಣಿ ಮನವಿ
‘ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸಿದವರೇ ಯಡಿಯೂರಪ್ಪ ಅವರು. ಮುಂದೆ 2 ಎಗೆ ಕೂಡಾ ಸೇರಿಸುತ್ತಾರೆ ಎಂಬ ನಿರೀಕ್ಷೆ ಇದೆ. ಕೇವಲ ಪಾದಯಾತ್ರೆ, ಹೋರಾಟಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಕೂಡಲಸಂಗಮದ ಸ್ವಾಮೀಜಿ ಅವರು ಪಾದಯಾತ್ರೆ ಕೈಬಿಡಬೇಕು’ ಎಂದು ಸಚಿವ ಮುರುಗೇಶ ನಿರಾಣಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.