ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಲಂಚ ಪಡೆದು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂಬ ಕಾಂಗ್ರೆಸ್ ಶಾಸಕರೊಬ್ಬರ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರ ಹೆಸರು ಉಲ್ಲೇಖ ಮಾಡದೆಯೇ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಲು ನಾನು ಬಿಜೆಪಿಯಿಂದ ಹಣ ಪಡೆದಿರುವುದಾಗಿ ಮಿತ್ರರೊಬ್ಬರು ಹೇಳಿದ್ದಾರೆ. ಆಗಲಿ, 2005ರಲ್ಲಿ ಎಸ್. ಎಂ. ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್ ಬಿಜೆಪಿಯಿಂದ ದುಡ್ಡು ತಂದಿತ್ತೇ?' ಎಂದು ಪ್ರಶ್ನಿಸಿದ್ದಾರೆ.
'2005ರ ಚಾಮರಾಜಪೇಟೆ ಉಪಚುನಾವಣೆಯ ಆ 'ಮುಸ್ಲಿಂ ಅಭ್ಯರ್ಥಿ'ಗಾಗಿ ಮಾಜಿ ಪ್ರಧಾನಿ ದೇವೇಗೌಡರು ಗಲ್ಲಿಗಲ್ಲಿಗಳಲ್ಲಿ ಸುತ್ತಿದ್ದರು. ಬೆವರು ಹರಿಸಿದ್ದರು. ದೇವೇಗೌಡರಂಥವರು ಅಂದು ಅಷ್ಟು ಕಷ್ಟಪಟ್ಟು ಉಪಚುನಾವಣೆ ನಡೆಸಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ, ಮನದಾಳದಿಂದ, ಪ್ರಾಮಾಣಿಕ ಉತ್ತರ ಕೊಡಬಹುದೇ?' ಎಂದಿದ್ದಾರೆ.
'ಚಾಮರಾಜಪೇಟೆ ಉಪಚುನಾವಣೆಯ ಮತದಾನಕ್ಕೆ ಇನ್ನು 2 ದಿನಗಳು ಬಾಕಿ ಉಳಿದಿವೆ ಎನ್ನುವಾಗ ನಮ್ಮ 'ಮುಸ್ಲಿಂ ಅಭ್ಯರ್ಥಿ' ಏಕಾಏಕಿ ಕಾಣೆಯಾಗಿದ್ದರು. ಕಾರಣ ಹುಡುಕಿದಾಗ ಹಣದ ಕೊರತೆ ಎಂಬ ಅಂಶ ಗೊತ್ತಾಯಿತು. ಅಂದು ಶಿವಮೊಗ್ಗ ಪ್ರವಾಸದಲ್ಲಿದ್ದ ನಾನು ಓಡೋಡಿ ಬಂದು ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೆ. ಅಂದು ನಾನು ತಂದ ಸಾಲ ಬಿಜೆಪಿಯ ಹಣವಾಗಿತ್ತೇ?' ಎಂದಿದ್ದಾರೆ.
'ಅಂದು ಚಾಮರಾಜಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್ 'ಮುಸ್ಲಿಂ ಅಭ್ಯರ್ಥಿ'ಯನ್ನು ಗುರುತಿಸಿತ್ತೇ? ಅಂದು ಬಿಜೆಪಿಯನ್ನು ಗೆಲ್ಲಿಸಲೆಂದು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದಿದ್ದರೆ ಇಂದು ನನ್ನ ವಿರುದ್ಧ ಆರೋಪ ಮಾಡಲು ಆ ನಾಯಕರೇ ಇರುತ್ತಿರಲಿಲ್ಲ. ಜೆಡಿಎಸ್ ಪಕ್ಷದ ತ್ಯಾಗಕ್ಕಾಗಿ ಕಿಂಚಿತ್ತು ಕೃತಜ್ಞತೆ ಉಳಿಯದಿದ್ದರೆ ಹೇಗೆ?' ಎಂದು ತಿರುಗೇಟು ನೀಡಿದ್ದಾರೆ.
'ಸನ್ಮಿತ್ರರು ನಮ್ಮಲ್ಲಿದ್ದಾಗ ಅವರನ್ನು ಬೆಂಗಳೂರು ಕೇಂದ್ರ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರ ಸೋದರನನ್ನು ಚಿಕ್ಕಪೇಟೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಇದೆಲ್ಲ ಮಾಡಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಜೆಡಿಎಸ್ ಪಕ್ಷ ಮತ್ತು ಇದರ ಕಾರ್ಯಕರ್ತರು ಎಲ್ಲರನ್ನೂ ಬೆಳೆಸಿದೆ. ಹೊರಗೆ ಹೋದವರನ್ನು ಹರಸಿದೆ. ಕೃತಜ್ಞತೆ ಇರಲಿ' ಎಂದಿದ್ದಾರೆ.
ಇದನ್ನೂ ಓದಿ:ಬಸವಕಲ್ಯಾಣ ಗೆದ್ದು ರಾಜ್ಯಕ್ಕೆ ಸಂದೇಶ ರವಾನೆ: ಕುಮಾರಸ್ವಾಮಿ ವಿಶ್ವಾಸ
'2008ರ ಆಪರೇಷನ್ ಕಮಲದ ನಂತರ ನಡೆದ 20ಕ್ಕೂ ಹೆಚ್ಚು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆಲ್ಲದೇ ಮುಖಭಂಗ ಅನುಭವಿಸಿತ್ತು. ಅದರ ಹಿಂದೆ ಯಾವ ನಾಯಕರು ಇದ್ದರು? ಎಷ್ಟು ಹಣ ಪಡೆದಿದ್ದರು? ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಸನ್ಮಿತ್ರರು ತಿಳಿಯಲಿ. ಹೇಗೂ ಅವರ ಅಕ್ಕಪಕ್ಕದಲ್ಲೆ ಇದ್ದೀರಲ್ಲ... ಕೇಳಿ ನೋಡಿ' ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಮೊದಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯಿಂದ ₹10 ಕೋಟಿ ಪಡೆದು ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಗಂಭೀರ ಆರೋಪ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.