ಬೆಂಗಳೂರು: ರಾಜ್ಯ ಪಠ್ಯಕ್ರಮದ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದ ಬಸವಣ್ಣನವರ ಪರಿಚಯ ಅಧ್ಯಾಯದಲ್ಲಿ ‘ವೀರಶೈವ’ ಪದ ಕೈಬಿಟ್ಟಿರುವ ವಿಚಾರದಲ್ಲಿ ಕಾನೂನು ಹೋರಾಟ ಕೈಗೊಳ್ಳಲು ಶನಿವಾರ ನಡೆದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ನಿರ್ಣಯ ಕೈಗೊಂಡಿದೆ.
ವೀರಶೈವ ಪದ ಕೈಬಿಡುವ ಮೂಲಕ ರಾಜ್ಯ ಸರ್ಕಾರ ನಿಜ ವೀರಶೈವ ಬಸವೇಶ್ವರರ ಇತಿಹಾಸಕ್ಕೆ ಅಪಪ್ರಚಾರ ಮಾಡಿದೆ. ದ್ರೋಹ ಎಸಗಿದೆ ಎಂದು ಮಹಾಂತಲಿಂಗ ಶಿವಾಚಾರ್ಯ, ವಿರೂಪಾಕ್ಷ ಶಿವಾಚಾರ್ಯ, ಸೂಗೂರೇಶ್ವರ, ಪ್ರಭು ಸಾರಂಗದೇವ, ನಾಮದೇವ, ರುದ್ರಮುನಿ ಶಿವಾಚಾರ್ಯ, ಕೈಲಾಸಲಿಂಗ, ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನಿಗದಿ ಮಾಡಿದ್ದ ಪಾಠದಲ್ಲಿ ‘ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಪ್ರಚುರಪಡಿಸಿದರು ಮತ್ತು ಶೈವಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆ ಪಡೆದು ಧ್ಯಾನ ಸಾಧನೆ ಮಾಡಿದರು’ ಎಂದಿತ್ತು. ಈಗ ಅದನ್ನು ಬದಲಿಸಲಾಗಿದೆ ಎಂದು ದೂರಿದ್ದಾರೆ.
ವೀರಶೈವ ಪದ ತೆಗೆದುಹಾಕಿರುವುದು ಸರಿಯಲ್ಲ. ಸಂಶೋಧಕ ಎಂ.ಎಂ. ಕಲಬುರಗಿ ಪ್ರಕಟಿಸಿರುವ ಸಮಗ್ರ ವಚನ ಸಂಪುಟದಲ್ಲಿನ ವಚನಗಳಲ್ಲಿ ಬಸವಣ್ಣ ಸೇರಿದಂತೆ 30ಕ್ಕೂ ಹೆಚ್ಚು ಶಿವಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದ ಬಳಸಿದ್ದಾರೆ. 10 ವಚನಗಳಲ್ಲಿ 21 ಕಡೆ ಮಾತ್ರ ಲಿಂಗಾಯತ ಪದ ಬಳಕೆ ಮಾಡಿದ್ದಾರೆ. ಆದರೆ, ಬಸವಣ್ಣ ಒಂದು ವಚನದಲ್ಲೂ ಲಿಂಗಾಯತ ಪದ ಬಳಸಿಲ್ಲ. ಒಂದು ವಚನದಲ್ಲಿ ತಾವು ನಿಜ ವೀರಶೈವ ಎಂದು ಉಲ್ಲೇಖಿಸಿದ್ದಾರೆ ಎಂದು ಸ್ವಾಮೀಜಿಗಳು, ತಿರುಚಿದ ಪಾಠವನ್ನು ಸರ್ಕಾರ ತಕ್ಷಣ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.