ADVERTISEMENT

ಬೆಳಗಲ್ ವೀರಣ್ಣ ನಿಧನ: ಸಿಎಂ ಬೊಮ್ಮಾಯಿ, ಪ್ರಲ್ಹಾದ್ ಜೋಶಿ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಏಪ್ರಿಲ್ 2023, 7:08 IST
Last Updated 2 ಏಪ್ರಿಲ್ 2023, 7:08 IST
   

ಬೆಂಗಳೂರು: ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಹಿರಿಯ ಕಲಾವಿದ ಬೆಳಗಲ್ ವೀರಣ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳಗಲ್ ವೀರಣ್ಣ ಸಾವಿಗೀಡಾಗಿದ್ದಾರೆ. ಬಳ್ಳಾರಿಯವರಾದ ವೀರಣ್ಣ ಅವರು ಪುತ್ರ ಹನುಮಂತ ಅವರೊಂದಿಗೆ ಬೆಂಗಳೂರಿಗೆ ಹೊರಟಾಗ ಈ ಅವಘಡ ಸಂಭವಿಸಿದೆ.

‘ತೊಗಲು ಗೊಂಬೆಯಾಟ’ ಎಂಬ ಜಾನಪದ ಕಲೆಗೆ ಹೊಸ ಸ್ಪರ್ಶ ನೀಡಿ, ಹೊಸ ವೈಭವವನ್ನು ಸೃಷ್ಟಿಸಿದ ಖ್ಯಾತ ರಂಗಭೂಮಿ ಮತ್ತು ಜಾನಪದ ಕಲಾವಿದ ನಾಡೋಜ ಬೆಳಗಲ್ ವೀರಣ್ಣನವರು ರಸ್ತೆ ಅಪಘಾತಕ್ಕೀಡಾಗಿ ಇಹಲೋಕ ತ್ಯಜಿಸಿದರು ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಕಲೆ ಸಂಸ್ಕೃತಿಯನ್ನು ತಮ್ಮ ಜೀವನದ ಉಸಿರಂತೆ ಬದುಕಿ ತೊಗಲು ಗೊಂಬೆಯಾಟಕ್ಕೆ ಹೊಸ ಆಯಾಮವನ್ನು ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಾಡೋಜ ಬೆಳಗಲ್ಲು ವೀರಣ್ಣ ಅವರು ನಮ್ಮನ್ನಗಲಿದ್ದಾರೆ. ಇತ್ತೀಚೆಗಷ್ಟೆ ಅವರನ್ನು ಭೇಟಿಯಾಗಿದ್ದೆ,ಅವರನ್ನು ಕಳೆದುಕೊಂಡ ಅವರ ಕುಟುಂಬದವರಿಗೆ, ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಆ ದೇವರು ಕರುಣಿಸಲಿ’ ಎಂದು ಸಾರಿಗೆ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

‘ರಾಜ್ಯದ ಹಿರಿಯ ರಂಗ ಕಲಾವಿದರಲ್ಲಿ ಒಬ್ಬರು, ತೊಗಲು ಬೊಂಬೆಯಾಟ’ ಕಲೆಯ ಮೂಲಕ ಜನಪ್ರಿಯರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು. ಮೃತರ ಕುಟುಂಬಸ್ಥರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಹಾಗೂ ಹಿರಿಯ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

‘ತೊಗಲು ಬೊಂಬೆಯಾಟ’ ಕಲೆಯ ಮೂಲಕ ಜನಪ್ರಿಯರಾದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು. ಮೃತರ ಕುಟುಂಬಸ್ಥರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಹಾಗೂ ಹಿರಿಯ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

ತೊಗಲು ಗೊಂಬೆಗಳಿಗೆ ಜೀವ ತುಂಬಿದ ಬೆಳಗಲ್‌ ವೀರಣ್ಣ ಇನ್ನಿಲ್ಲ. ನಿನ್ನೆಯಷ್ಟೇ ಬೆಳಗಲ್‌ ವೀರಣ್ಣ ಅವರನ್ನು ನೆನೆಸಿಕೊಂಡಿದ್ದೆ. ‘ಇತ್ತೀಚೆಗೆ ಮಾತೇ ಆಡಿಲ್ಲ, ಹೇಗಿದ್ದಾರೋ ಏನೋ? ಪ್ರಕಾಶ್‌ಗೆ ಫೋನ್‌ ಮಾಡಬೇಕುʼ ಅಂದುಕೊಂಡಿದ್ದೆ. ಆದರೆ ಈಗ ಬಂದ ಸುದ್ದಿಯಂತೆ ಅವರು ರಾತ್ರಿ ಅಫಘಾತವೊಂದರಲ್ಲಿ ತೀರಿಕೊಂಡರಂತೆ. 91 ವರ್ಷದ ವಯಸ್ಸಿನ ವೀರಣ್ಣ ತೊಗಲು ಗೊಂಬೆಯ ಅಭಿಜಾತ ಕಲಾವಿದ. ರಂಗಭೂಮಿಯ ಅಸಾಮಾನ್ಯ ನಟ. ತನ್ನ ಅದ್ಭುತವಾದ ಸಿರಿಕಂಠದಿಂದ ಪ್ರೇಕ್ಷಕರಿಗೆ ಮೋಡಿಮಾಡಬಲ್ಲ ಗಂಧರ್ವ.
ಬೆಳಗಲ್‌ ವೀರಣ್ಣ ತುಂಬ ಸೃಜನಶೀಲವಾಗಿ ಯೋಚಿಸಬಲ್ಲ ಅಪೂರ್ವ ವ್ಯಕ್ತಿಯಾಗಿದ್ದರು. ಗಾಂಧೀಜಿ ಬಗ್ಗೆ, ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಆಧುನಿಕ ಗೊಂಬೆಗಳನ್ನು ತಯಾರಿಸಿ ದೆಹಲಿಯಲ್ಲಿ ಪ್ರಸಿದ್ಧರಾಗಿದ್ದರು. ಜೆಎನ್‌ಯುವಿನಲ್ಲಿಯೂ ಅವರದೊಂದು ಪ್ರದರ್ಶನ ಏರ್ಪಡಿಸಿದ್ದೆ. ಜಾನಪದ ಅಕಾಡೆಮಿಯಲ್ಲಿ ನಾನು ಮತ್ತು ಅವರು ಒಟ್ಟಿಗೇ ಮೂರು ವರ್ಷ ಕೆಲಸ ಮಾಡಿದ್ದೆವು. ಅವರ ಸ್ನೇಹ ಬಹಳ ಅಪೂರ್ವವಾದದ್ದು. ನಿಡುಗಾಲದ ಒಡನಾಡಿ ವೀರಣ್ಣ ಅವರಿಗೆ ನಮನಗಳು. ಅವರ ನಿಧನದಿಂದ ತೊಗಲು ಗೊಂಬೆಯಾಟದ ಒಂದು ಅಧ್ಯಾಯ ಮುಗಿದಂತಾಯಿತು ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.