ಚಿತ್ರದುರ್ಗ: ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಸಂಪುಟದಲ್ಲಿ ಮತ್ತೆ ಸ್ಥಾನ ಕಲ್ಪಿಸಿ ಪಕ್ಷ ತೆಗೆದುಕೊಂಡ ನಿರ್ಧಾರ ಘಾಸಿಯುಂಟು ಮಾಡಿದೆ. ಪಕ್ಷದ ಇತರ ಇಬ್ಬರು ಶಾಸಕಿಯರಿಗೆ ಮಾಡಿದ ದೊಡ್ಡ ಅವಮಾನ ಇದು ಎಂದು ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸಂಪುಟದಲ್ಲಿ ಅವಕಾಶ ಕೈತಪ್ಪಿರುವುದರಿಂದ ನೊಂದಿರುವ ಅವರು ‘ಫೇಸ್‌ಬುಕ್ ವಾಲ್’ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಒಂದೇ ಮನೆಯಲ್ಲಿ ಇಬ್ಬರಿಗೆ ಅಧಿಕಾರ ನೀಡಲಾಗಿದೆ. ಯಾವುದೇ ಹಗರಣ ಇಲ್ಲದಿರುವ ಇನ್ನೊಬ್ಬ ಮಹಿಳೆಗೆ ಸಚಿವ ಸ್ಥಾನ ನೀಡಿದ್ದರೆ ಸಂತೋಷದಿಂದ ಸ್ವಾಗತಿಸುತ್ತಿದ್ದೆ’ ಎಂದು ಬರೆದುಕೊಂಡಿದ್ದಾರೆ.
‘ವಿಧಾನಪರಿಷತ್ತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪತಿ ಸ್ಪರ್ಧಿಸಿದ್ದರು. ಪತಿಯ ಪರವಾಗಿ ಮತಯಾಚನೆ ಮಾಡದೇ ಪಕ್ಷ ನಿಷ್ಠೆ ತೋರಿದೆ. ಶಿರಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದೆ. ಕ್ಷೇತ್ರದಲ್ಲಿನ ಗೊಲ್ಲ ಸಮುದಾಯದ ಅತಿ ಹೆಚ್ಚು ಮತಗಳನ್ನು ಪಕ್ಷಕ್ಕೆ ತಂದಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.
‘2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಸೋಲಿಸಲು ಸಮುದಾಯದ ಮತಗಳು ನಿರ್ಣಾಯಕವಾಗಿದ್ದವು. ಇತರೆ ಹಿಂದುಳಿದ ಸಮಾಜವನ್ನು ಒಗ್ಗೂಡಿಸಿ ಸಂಘಟನೆ ಮಾಡಿ ಪಕ್ಷಕ್ಕೆ ಹೆಚ್ಚು ಮತಗಳನ್ನು ತರುವಲ್ಲಿ ಯಶಸ್ವಿಯಾದೆ. ಪಕ್ಷ ಇವೆಲ್ಲವನ್ನು ಮರೆತು ಜಾಣ ಕುರುಡತನ ಪ್ರದರ್ಶಿಸುತ್ತಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
‘ಗೊಲ್ಲ ಸಮುದಾಯದ ಏಕೈಕ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಸಿದ ನಾನು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಯಾವುದೇ ಹಗರಣ ನನ್ನ ಸುತ್ತಿಕೊಂಡಿಲ್ಲ. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿವೆ. ಸಮುದಾಯ ಪ್ರತಿನಿಧಿಸುವವರಿಗೆ ಅವಕಾಶ ಕಲ್ಪಿಸದೇ ಇರುವುದು ನೋವುಂಟು ಮಾಡಿದೆ. ಕಳೆದ ಚುನಾವಣೆಯಲ್ಲಿ ಸಮುದಾಯದ ಶೇ 80ರಷ್ಟು ಮತಗಳು ಬಿಜೆಪಿಗೆ ಸಿಕ್ಕಿವೆ ಎಂಬುದನ್ನು ಪಕ್ಷ ಮರೆಯಬಾರದು’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಶಾಸಕರಾದ ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ ಹಾಗೂ ಹಿರಿಯ ರಾಜಕಾರಣಿ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬಹುದಿತ್ತು. ಜಿಲ್ಲೆಗೆ ಬಿಜೆಪಿ ಅವಮಾನ ಮಾಡುತ್ತಿದೆ. ಆದರೂ, ರಾಜ್ಯ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಎಲ್ಲ ಸಚಿವರಿಗೆ ಹೃದಯಪೂರ್ವಕ ಅಭಿನಂದನೆ’ ಎಂದು ಶುಭಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.