ADVERTISEMENT

ಹಿಂಸೆಗೆ ಇಳಿದರೆ ಕ್ರಮ: ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಬಸವರಾಜ ಬೊಮ್ಮಾಯಿ

ಗೂಂಡಾಗಳಿಗೆ ರಾಜ್ಯ ಕೊಟ್ಟು ಮೌನಕ್ಕೆ ಶರಣಾದ ಮುಖ್ಯಮಂತ್ರಿ: ಖಾದರ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 6:03 IST
Last Updated 12 ಏಪ್ರಿಲ್ 2022, 6:03 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ವಿಚಾರಗಳ ಪ್ರಚಾರ ಮಾಡುವ ಸಂಘಟನೆಗಳಿಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ. ಆದರೆ, ಕಾನೂನು ಕೈಗೆತ್ತಿಕೊಂಡು ಹಿಂಸೆಗೆ ಇಳಿದರೆ ಅದನ್ನು ಸಹಿಸಲಾಗದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸ್ಪಷ್ಟ ಎಚ್ಚರಿಕೆ ನೀಡಿದರು.

‘ಶಾಂತಿ ಕದಡುವ ಶಕ್ತಿಗಳ ಬಗ್ಗೆ ಮುಖ್ಯಮಂತ್ರಿ ಮೌನವಾಗಿದ್ದು, ಇಂತಹಕೃತ್ಯಗಳಿಗೆ ಅವರ ಬೆಂಬಲ ಇದೆಯೇ’ ಎಂದು ವಿರೋಧ ಪಕ್ಷದ ನಾಯಕರು ಕಟುವಾಗಿ ಪ್ರಶ್ನಿಸಿದ್ದರು. ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಅವರು, ‘ಕೋಮುಸೌಹಾರ್ದಕ್ಕೆ ಧಕ್ಕೆಯಾಗದಂತೆ ಬಿಗಿಕ್ರಮ ಕೈಗೊಳ್ಳಬೇಕು’ ಎಂದೂ ಸಲಹೆ ನೀಡಿದ್ದರು.

ಈ ಬೆನ್ನಲ್ಲೇ, ಉಡುಪಿಯಲ್ಲಿ ಮಾತನಾಡಿದ ಬೊಮ್ಮಾಯಿ, ‘ಸಂವಿಧಾನಬದ್ಧವಾಗಿ ರಚನೆಯಾಗಿರುವ ‌ಸರ್ಕಾರ ಕಾನೂನು, ಸುವ್ಯವಸ್ಥೆ ಹಾಗೂ ಸಮಾನತೆಯ ದೃಷ್ಟಿಯಿಂದ ಕೆಲಸ ಮಾಡುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ವಿರೋಧಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾವು ಮಾತನಾಡಬಾರದು, ನಮ್ಮ ಕೆಲಸಗಳು ಮಾತನಾಡಬೇಕು. ಯಾವಾಗ, ಯಾವ ನಿರ್ಧಾರ ಅಥವಾ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ವಿರೋಧಪಕ್ಷಗಳಿಂದ ಕಲಿಯಬೇಕಿಲ್ಲ’ ಎಂದರು.

‘ಈ ಹಿಂದೆ ಹಲವು ಯುವಕರ ಕೊಲೆ ನಡೆದಾಗ, ನೇರವಾಗಿ ಭಾಗಿಯಾಗಿದ್ದ ಸಂಘಟನೆಗಳು ಹಾಗೂ ಮುಖಂಡರ ಮೇಲಿದ್ದ ಪ್ರಕರಣಗಳನ್ನು ಕೈಬಿಟ್ಟಾಗ ಕಾಂಗ್ರೆಸ್‌ನ ಕರ್ತವ್ಯ ಪ್ರಜ್ಞೆ ಎಲ್ಲಿಗೆ ಹೋಗಿತ್ತು’ ಎಂದು ಪ್ರಶ್ನಿಸಿದ ಬೊಮ್ಮಾಯಿ, ‘ಶಾಂತಿ, ಸುವ್ಯವಸ್ಥೆಯಿರುವ ಪ್ರಗತಿಪರ ರಾಜ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

ಮಂಗಳೂರಿನಲ್ಲಿ ಲವ್ ಜಿಹಾದ್ ತಡೆಗೆ ‘ಹಿಂದೂ ಟಾಸ್ಕ್ ಫೋರ್ಸ್’ ರಚನೆ ಕುರಿತಂತೆ ಅವರು ‘ಎಲ್ಲದಕ್ಕೂ ಕಾನೂನುಗಳಿವೆ. ಕೆಲವನ್ನು ಹಿಂದಿನ ಸರ್ಕಾರಗಳೇ ಮಾಡಿವೆ. ಬಿಜೆಪಿ ಸರ್ಕಾರ ಹೊಸದಾಗಿ ಮಾಡಿಲ್ಲ. ಕಾನೂನು ಪ್ರಕಾರ ನಡೆಯುವುದು ಸರ್ಕಾರದ ಕರ್ತವ್ಯ’ ಎಂದರು.

ಸಿ.ಎಂ ಮೌನ ಏಕೆ –ಖಾದರ್: ‘ಆತ್ಮವಿಶ್ವಾಸದ ಮಾತನಾಡಿ ಜನರಿಗೆ ಧೈರ್ಯ ತುಂಬಬೇಕಿದ್ದ ಸಿ.ಎಂ ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟು ಮೌನವಾಗಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವವರನ್ನು ಸರ್ಕಾರ ಮಟ್ಟ ಹಾಕಬೇಕು. ಈ ವಿಷಯದಲ್ಲಿ ಸಿಎಂ ಸುಮ್ಮನಿರುವುದು ಏಕೆ?’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಯಾವುದೇ ಧರ್ಮದವರು ತಪ್ಪು ಮಾಡಿದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಕೆಲವು ಕೋಮು ಶಕ್ತಿಗಳು ರಾಜ್ಯದಲ್ಲಿ ಸಮಸ್ಯೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಸರ್ಕಾರ ಸುಮ್ಮನಿದ್ದರೆ, ಅವರಿಗೆ ತಪ್ಪು ಮಾಡಲು ಮತ್ತಷ್ಟು ಧೈರ್ಯ ಬರುವ ಸಾಧ್ಯತೆ ಇರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.