ಬೆಂಗಳೂರು: ‘ಬ್ಯಾಂಕಿಂಗ್ ವಲಯದಲ್ಲಿ ಆಗುತ್ತಿರುವ ವಂಚನೆಗಳನ್ನು ತಡೆಯಲು ಸಮನ್ವಯ ಸಮಿತಿ ರಚಿಸಲು ನಿರ್ಧರಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುವ ಅವ್ಯವಹಾರ, ವಂಚನೆಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್ ಗಳು ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಈ ಸಮಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದವರು, ಮಾಹಿತಿ ತಂತ್ರಜ್ಞಾನ (ಐಟಿ) ತಜ್ಞರು, ಹಿರಿಯ ಪೊಲೀಸ್ ಅಧಿಕಾರಿಗಳು ಇರುತ್ತಾರೆ’ ಎಂದರು.
‘ಡಿಜಿಟಲ್ ಬ್ಯಾಂಕಿಂಗ್ ಮೋಸ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನಕಲಿ ಕಸ್ಟಮರ್ ಕೇರ್ ಕರೆ ತಡೆಗಟ್ಟಲು ಏಕಗವಾಕ್ಷಿ ಪದ್ಧತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಆ ಮೂಲಕ ವಂಚನೆ, ಮೋಸ ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು. ಮೋಸಕ್ಕೆ ಒಳಗಾದವರು ವಾಟ್ಸ್ ಆ್ಯಪ್ ಸಂದೇಶ ಕಳುಹಿಸುವ ಮೂಲಕ ದೂರು ದಾಖಲಿಸಬಹುದು. ಇದಕ್ಕಾಗಿ ಸದ್ಯದಲ್ಲೇ ಒಂದು ವಾಟ್ಸಾಪ್ ನಂಬರ್ ಕೊಡಲಾಗುವುದು. ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯಿಂದ ಸಲಹೆ ಪಡೆದು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು’ ಎಂದರು.
‘ಸಾಮಾನ್ಯ ಜನರ ಹಣ ಬ್ಯಾಂಕ್ ಖಾತೆಯಲ್ಲಿ ಸುರಕ್ಷಿತವಾಗಿರಬೇಕಾಗಿದೆ. ಈ ಕಾರಣಕ್ಕೆ ಬ್ಯಾಂಕ್‌ನಿಂದ ಬ್ಯಾಂಕ್, ಬ್ಯಾಂಕ್‌ನಿಂದ ಗ್ರಾಹಕರಿಗೆ ಮಾಹಿತಿ ಪರಸ್ಪರ ಹಂಚಿಕೆ ಆಗಬೇಕಿದೆ. ಬ್ಯಾಂಕ್‌ಗಳ ಡಿಜಿಟಲೀಕರಣಗೊಂಡ ಬಳಿಕ ಸಾಮಾನ್ಯ ಜನರಿಗೆ ವಂಚನೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೋಸ ಆಗುತ್ತದೆ. ಸರ್ಕಾರದ ಖಾತೆಯಿಂದಲೂ ಮೋಸದಿಂದ ಹಣ ವರ್ಗಾವಣೆ ಮಾಡಲಾಗುತ್ತದೆ. ಹೀಗೆ, ಈ ರೀತಿಯ ಹಲವು ವಂಚನೆಗಳು ನಡೆಯುತ್ತಿವೆ. ಎಲ್ಲ ಬ್ಯಾಂಕರ್ಸ್, ಬ್ಯಾಂಕ್‌ಗಳ ಪ್ರತಿನಿಧಿಗಳಿಗೆ ಕೆಲವು ಸೂಚನೆ ನೀಡಲಾಗಿದೆ. ಎಪಿಎಂಸಿ ಖಾತೆಯಿಂದಲೇ ಇತ್ತೀಚೆಗೆ ₹ 47 ಕೋಟಿ ಮೋಸ ಆಗಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ’ ಎಂದರು
‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪರಾಧ ಹೆಚ್ಚುತ್ತಿದೆ. ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳನ್ನು ನಕಲಿ ಮಾಡಿ ಹಣ ಲಪಟಾಯಿಸುವುದು, ಖಾತೆಗಳಲ್ಲಿನ ಹಣ ಲಪಟಾಯಿಸುವುದು ಸೇರಿ ಸಾಕಷ್ಡು ಅಪರಾಧಗಳು ನಡೆಯುತ್ತಿವೆ. ಅದಕ್ಕೆ ತಡೆ ಹಾಕುವ ಉದ್ದೇಶದಿಂದ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ’ ಎಂದರು.
‘ಬ್ಯಾಂಕ್‌ಗಳು ಹಾಗೂ ಗ್ರಾಹಕರ ಮಾಹಿತಿಗಳು ಸೋರಿಕೆಯಾಗುತ್ತಿವೆ. ಹಣಕಾಸು ಇಲಾಖೆ, ಸಿಐಡಿ, ಕಾನೂನು ತಜ್ಞರು, ಆರ್‌ಬಿಐ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸೇರಿ ಚರ್ಚೆ ಮಾಡಿದ್ದೇವೆ. ಐಟಿ ತಜ್ಞರ ಜೊತೆಗೂ ಚರ್ಚೆ ಮಾಡುತ್ತೇನೆ. ಅಕ್ರಮ ತಡೆಯಲು ಅವರು ಕೂಡ ಸಹಕಾರ ನೀಡಲಿದ್ದಾರೆ’ ಎಂದರು.
‘ಸಾಮಾನ್ಯ ಜನರ ಎಟಿಎಂ ಕಾರ್ಡ್, ಖಾತೆಗಳು ಸುರಕ್ಷಿತವಾಗಿರಬೇಕು. ಸಾಮಾನ್ಯ ಜನರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಸೈಬರ್ ಕ್ರೈಂ ತಡೆಗೆ ಕ್ರಮಕೈಗೊಳ್ಳಲಾಗುವುದು. ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಬ್ಯಾಂಕ್‌ಗಳು ಅಳವಡಿಸಿಕೊಳ್ಳುವುದು, ನಿಯಮಗಳನ್ನು ಜಾರಿ ಮಾಡುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ’ ಎಂದು ಅವರು ವಿವರಿಸಿದರು.
ಡಿಜಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.