ADVERTISEMENT

ಪಕ್ಷ, ಕಾರ್ಯಕರ್ತರಿಗಾಗಿ ಮಗನಿಗೆ ಟಿಕೆಟ್‌ ಒಪ್ಪಿಕೊಂಡೆ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:42 IST
Last Updated 20 ಅಕ್ಟೋಬರ್ 2024, 14:42 IST
ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಭರತ್‌ ಬೊಮ್ಮಾಯಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದರು.
ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಭರತ್‌ ಬೊಮ್ಮಾಯಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದರು.   

ಬೆಂಗಳೂರು: ‘ನನ್ನ ಮನಸ್ಸಿನಲ್ಲಿ ಏನೇ ಇದ್ದರೂ ಪಕ್ಷಕ್ಕಾಗಿ, ಸಮಾಜಕ್ಕಾಗಿ, ಕಾರ್ಯಕರ್ತರಿಗಾಗಿ ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇನೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ತಮ್ಮ ಪುತ್ರ ಭರತ್‌ ಬೊಮ್ಮಾಯಿಗೆ ಶಿಗ್ಗಾವಿ ಉಪಚುನಾವಣೆಗೆ ಟಿಕೆಟ್‌ ಸಿಕ್ಕ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬೊಮ್ಮಾಯಿ ಅವರು ಗೆಲುವು ಸಾಧಿಸಿದ್ದರಿಂದ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಅದರಿಂದ ಉಪಚುನಾವಣೆ ಎದುರಾಗಿದೆ.

‘ಪಕ್ಷದ ಹಿತದೃಷ್ಟಿ, ಈಗಿನ ರಾಜಕೀಯ ಹಿತದೃಷ್ಟಿ ಮತ್ತು ಕ್ಷೇತ್ರದ ದೃಷ್ಟಿಯಿಂದ ಭರತ್‌ಗೆ ಟಿಕೆಟ್‌ ನೀಡಲು ನಿರ್ಧರಿಸಿರುವುದಾಗಿ ವರಿಷ್ಠರು ತಿಳಿಸಿದ್ದಾರೆ. ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ನಾನು ಎರಡು ದಿನ ಸಮಯ ಕೇಳಿದ್ದೆ. ಆದರೆ, ಸಮಯ ಕೊಡದೇ ಘೋಷಣೆ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನನಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ನಿಮ್ಮ ಮಗನಿಗೆ ಟಿಕೆಟ್‌ ನೀಡಲು ನಿರ್ಧರಿಸಿದ್ದೇವೆ. ಅಲ್ಲಿ ನಿಮಗೆ ಹೆಸರಿದೆ ಮತ್ತು ಗೆಲುವು ಮುಖ್ಯ. ಸರ್ವೆ ವರದಿ ಕೂಡ ಭರತ್‌ ಪರ ಇದೆ ಎಂದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ದೂರವಾಣಿ ಮೂಲಕ ಮಾತನಾಡಿ ಚುನಾವಣೆ ಎದುರಿಸಬೇಕು. ಚುನಾವಣೆ ಗೆಲ್ಲಬೇಕು ಎಂದರು. ಹೀಗಾಗಿ ವರಿಷ್ಠರ ನಿರ್ಧಾರಕ್ಕೆ ತಲೆ ಬಾಗಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

ADVERTISEMENT

‘ಈ ಬಾರಿ ಭರತ್‌ಗೆ ಟಿಕೆಟ್‌ ಬೇಡ ಎನ್ನುವುದು ಇತ್ತು. ಆದರೆ, ಪಕ್ಷ ನಂಬಿಕೆ ಇಟ್ಟು ಅವಕಾಶ ಕೊಟ್ಟಿದೆ. ನಾನು ಏನೇ ಆಗಿದ್ದರೂ ಅದಕ್ಕೆ ಪಕ್ಷವೇ ಕಾರಣ. ವಿಶ್ವಾಸ ಇಟ್ಟು ಪಕ್ಷ ತೀರ್ಮಾನ ಮಾಡಿರುವಾಗ ನಾನು ಬೇಡ ಅನ್ನಲು ಆಗಲಿಲ್ಲ. ನನ್ನ ಮನಸ್ಸಿನ ಭಾವನೆ ಏನೇ ಇದ್ದರೂ ಪಕ್ಷ ತೀರ್ಮಾನ ಮಾಡಿರುವಾಗ ಒಪ್ಪಿಕೊಂಡೆ’ ಎಂದು ಅವರು ವಿವರಿಸಿದರು.

‘ಜನರ ಅಪೇಕ್ಷೆ ಮೇರೆಗೆ ಟಿಕೆಟ್‌’

‘ನಮ್ಮ ತಂದೆ ಶಿಗ್ಗಾವಿ– ಸವಣೂರಿನಲ್ಲಿ ನಾಲ್ಕು ಬಾರಿ ಶಾಸಕರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಅಲ್ಲಿನ ಜನರ ಅಪೇಕ್ಷೆಯಂತೆ  ಪಕ್ಷದ ವರಿಷ್ಠರು ಟಿಕೆಟ್‌ ನೀಡಿದ್ದಾರೆ’ ಎಂದು ಭರತ್‌ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

‘ತಂದೆಯವರು ಮಾಡಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತೇನೆ. ಕ್ಷೇತ್ರದ ಜನತೆಯ ಕಷ್ಟ– ಸುಖದಲ್ಲಿ ಸದಾ ಕಾಲ ಇರುತ್ತೇನೆ. 2018 ರಿಂದ ತಂದೆಯ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿ ತಂದೆಯ ಪರವಾಗಿ ಪ್ರಚಾರ ಮಾಡಿದ್ದೇನೆ. ಕ್ಷೇತ್ರದ ಜನರ ಜತೆ ಸಂಪರ್ಕ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.