ADVERTISEMENT

ಅತೃಪ್ತರಿಗೆ ‘ಸಂಪುಟ’ದ ಗರಿ: ರಾಯರಡ್ಡಿ, ಪಾಟೀಲರಿಗೆ ಸಂಪುಟ ದರ್ಜೆ ಸ್ಥಾನ–ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 16:20 IST
Last Updated 29 ಡಿಸೆಂಬರ್ 2023, 16:20 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಬೆಂಗಳೂರು: ಸರ್ಕಾರದ ವಿರುದ್ಧ ಬಹಿರಂಗವಾಗಿ ನಿರಂತರ ವಾಗ್ದಾಳಿ ನಡೆಸಿ ಮುಜುಗರಕ್ಕೆ ಸಿಲುಕಿಸುತ್ತಿದ್ದ ಶಾಸಕರಾದ ಬಸವರಾಜ ರಾಯರಡ್ಡಿ ಮತ್ತು ಬಿ.ಆರ್‌. ಪಾಟೀಲ ಅವರಿಗೆ ಸಂಪುಟ ದರ್ಜೆ ಸ್ಥಾನದೊಂದಿಗೆ ಸಲಹೆಗಾರರ ಹುದ್ದೆ ನೀಡುವ ಮೂಲಕ ಅತೃಪ್ತಿ ಶಮನದ ಯತ್ನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ದೀರ್ಘಕಾಲದ ರಾಜಕೀಯ ಒಡನಾಡಿಗಳಾದ ರಾಯರಡ್ಡಿ ಮತ್ತು ಪಾಟೀಲ, ಸಚಿವ ಸಂಪುಟ ರಚನೆಯ ಬಳಿಕ ಅಸಮಾಧಾನಗೊಂಡಿದ್ದರು. ಸಂಪುಟ ಸದಸ್ಯರು ಹಾಗೂ ಸರ್ಕಾರ ಕಾರ್ಯವೈಖರಿ ವಿರುದ್ಧ ಆಗಾಗ ಟೀಕೆ ನಡೆಸುತ್ತಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಸಚಿವರ ನಡೆಯ ವಿರುದ್ಧ ಶಾಸಕರ ಸಹಿ ಹಾಕಿಸಿದ್ದರೆಂಬ ಆರೋಪಕ್ಕೂ ಗುರಿಯಾಗಿದ್ದ ಇಬ್ಬರು, ತಮ್ಮ ನಡವಳಿಕೆಯ ಮೂಲಕ ಪಕ್ಷವನ್ನು ಮುಜುಗರಕ್ಕೆ ದೂಡಿದ್ದರು.

ರಾಯರಡ್ಡಿ ಅವರಿಗೆ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರ ಹುದ್ದೆ ನೀಡಿದ್ದರೆ, ಬಿ.ಆರ್‌. ಪಾಟೀಲ ಅವರನ್ನು ಮುಖ್ಯಮಂತ್ರಿಯವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯ, ಮುಖ್ಯಮಂತ್ರಿಯವರ ನಿಕಟ ಒಡನಾಡಿಗಳಲ್ಲಿ ಒಬ್ಬರಾದ ಹಳಿಯಾಳ ಶಾಸಕ ಆರ್‌.ವಿ. ದೇಶಪಾಂಡೆ ಅವರನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮೂವರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ರಾಜ್ಯ ಪರಿವರ್ತನಾ ಸಂಸ್ಥೆ (ಯೋಜನಾ ಮಂಡಳಿ) ಸೇರಿದಂತೆ ವಿವಿಧ ಹುದ್ದೆಗಳ ಪ್ರಸ್ತಾವವನ್ನು ರಾಯರಡ್ಡಿ ಮತ್ತು ಪಾಟೀಲರ ಮುಂದಿಡಲಾಗಿತ್ತು. ಆದರೆ, ಯಾವುದೇ ಸಚಿವರ ಅಧಿಕಾರ ವ್ಯಾಪ್ತಿಯ ಅಧೀನದಲ್ಲಿರುವ ಹುದ್ದೆಗಳನ್ನು ಒಪ್ಪಿಕೊಳ್ಳಲು ಇಬ್ಬರೂ ನಿರಾಕರಿಸಿದ್ದರು. ತಮ್ಮ ಹಿರಿತನವನ್ನು ಪರಿಗಣಿಸಿ ಮುಖ್ಯಮಂತ್ರಿಯವರ ಅಧಿಕಾರ ವ್ಯಾಪ್ತಿಯಲ್ಲಿರುವ ಹುದ್ದೆಗಳನ್ನೇ ನೀಡುವಂತೆ ಪಟ್ಟು ಹಿಡಿದಿದ್ದರು.

ವಿಧಾನಮಂಡಲದ ಹಿಂದಿನ ಅಧಿವೇಶನದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡುವಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೀಡಿದ್ದ ಹೇಳಿಕೆಯಿಂದ ತಮಗೆ ಮುಜುಗರವಾಗಿದೆ ಎಂದು ಚಳಿಗಾಲದ ಅಧಿವೇಶನಕ್ಕೂ ಮೊದಲು ಪಾಟೀಲ ತಕರಾರು ಎತ್ತಿದ್ದರು. ವಿಧಾನಮಂಡಲದ ಬೆಳಗಾವಿ ಅಧಿವೇಶನದಿಂದ ದೂರ ಉಳಿಯುವುದಾಗಿಯೂ ಪ್ರಕಟಿಸಿದ್ದರು. ಮುಖ್ಯಮಂತ್ರಿಯವರು ಖುದ್ದಾಗಿ ಮನವೊಲಿಸಿದ ಬಳಿಕ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.

ಸಲಹೆಗಾರರ ಹೆಚ್ಚಳ: ಇಬ್ಬರು ಸಲಹೆಗಾರರನ್ನು ನೇಮಿಸಿ ಶುಕ್ರವಾರ ಆದೇಶ ಹೊರಡಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಗಾರರ ಪಟ್ಟಿ ಮತ್ತಷ್ಟು ದೊಡ್ಡದಾಗಿದೆ. ಎಲ್ಲರಿಗೂ ಸಚಿವ ಸಂಪುಟ ದರ್ಜೆಯ ಸ್ಥಾನ ಮತ್ತು ಸೌಲಭ್ಯ ನೀಡಲಾಗಿದೆ.

3 ಡಿಸಿಎಂ: ಮತ್ತೆ ಮುನ್ನೆಲೆಗೆ

ಲೋಕಸಭಾ ಚುನಾವಣೆಗೂ ಮುನ್ನ ಇನ್ನೂ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಲೋಕೋಪಯೋಗಿ ಸಚಿವ ಸಚಿವ ಸತೀಶ ಜಾರಕಿಹೊಳಿ ಅವರ ಅಭಿಪ್ರಾಯಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಸಹಮತ ವ್ಯಕ್ತಪಡಿಸಿದರು.

‘ಜಾತಿವಾರು ಡಿಸಿಎಂ ಹುದ್ದೆಗಳನ್ನು ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಅನುಕೂಲ
ವಾಗಲಿದೆ. ಶಾಸಕರಿಂದಲೂ ಈ ಕುರಿತು ಬೇಡಿಕೆ ಇದೆ. ಸಚಿವರನ್ನೂ ಜಾತಿ ಆಧಾರದಲ್ಲೇ ಮಾಡುವುದರಿಂದ ಡಿಸಿಎಂ ಹುದ್ದೆಗಳನ್ನು ಹಾಗೆಯೇ ನೀಡಿದರೆ ಲಾಭವಾಗುತ್ತದೆ. ಈ ಬಗ್ಗೆ ಅಧ್ಯಕ್ಷರು ಮಾತನಾಡಬೇಕು’ ಎಂದು ಸತೀಶ ಅವರು ಗುರುವಾರ ಹೇಳಿದ್ದರು.

ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಈ ವಿಚಾರವಾಗಿ ಹೈಕಮಾಂಡ್‌ ಮೇಲೆ ಒತ್ತಡ ಹೇರಬೇಕು ಎನ್ನುವ ಸತೀಶ ಅವರ ಹೇಳಿಕೆಯಲ್ಲಿ ತಪ್ಪೇನಿಲ್ಲ. ಅಭಿಪ್ರಾಯ ತಿಳಿಸಲು ನಿರ್ಬಂಧವಿಲ್ಲ. ನಿರ್ಬಂಧ ಹಾಕುವುದೂ ಸರಿಯಲ್ಲ ಎಂದರು.

‘ಸತೀಶ ಅವರ ಅಭಿಪ್ರಾಯವನ್ನು ಪರಿಗಣಿಸುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರ ದೃಷ್ಟಿಯಲ್ಲಿ ಆಯಾ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತೇಜನ ನೀಡಿದ ಹಾಗೆ ಆಗುತ್ತದೆ. ಇದರಿಂದ ಆ ಸಮುದಾಯದ ಜನ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎನ್ನುವ ಅಭಿಪ್ರಾಯ ಸರಿ ಇದೆ’ ಎಂದರು.

ಮೂವರು ಡಿಸಿಎಂ ಸೃಷ್ಟಿ ಕುರಿತು ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ‘ಈ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ನಾಯಕರ ಮುಂದೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಸಾರ್ವಜನಿಕವಾಗಿ ಮಾತನಾಡುವುದು ಅಗತ್ಯವಿಲ್ಲ’ ಎಂದು ಅವರು ಹೇಳಿದರು.

3ನೇ ಆಯೋಗಕ್ಕೆ ದೇಶಪಾಂಡೆ ಸಾರಥ್ಯ

ರಾಜ್ಯದ ಮೂರನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಶಾಸಕ ಆರ್‌.ವಿ. ದೇಶಪಾಂಡೆ ಅವರನ್ನು ನೇಮಿಸಲಾಗಿದೆ.

ಹಾರನಹಳ್ಳಿ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ 2000ನೇ ಇಸವಿಯ ಏಪ್ರಿಲ್‌ 17ರಂದು ರಾಜ್ಯದ ಮೊದಲನೇ ಆಡಳಿತ ಸುಧಾರಣಾ ಆಯೋಗವನ್ನು ನೇಮಿಸಲಾಗಿತ್ತು. 2001ರಲ್ಲಿ ಆಯೋಗವು ಅಂತಿಮ ವರದಿ ಸಲ್ಲಿಸಿತ್ತು.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ರಾಜ್ಯದ ಎರಡನೇ ಆಡಳಿತ ಸುಧಾರಣಾ ಆಯೋಗ ನೇಮಿಸಿ 2021ರ ಜನವರಿ 7ರಂದು ಆದೇಶ ಹೊರಡಿಸಲಾಗಿತ್ತು. ಈ ಆಯೋಗವು ಇದುವರೆಗೆ ಹಲವು ವರದಿಗಳನ್ನು ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.