ಶ್ರೀವಿಜಯ ಪ್ರಧಾನ ವೇದಿಕೆ (ಕಲಬುರ್ಗಿ): ಸಿರಾಜ್ ಬಿಸರಳ್ಳಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಾಹಿತಿ ಬಸವರಾಜ ಸಬರದ, ‘ಕವಿಗಳನ್ನು ಬಂಧಿಸಿ ಮತ್ತೊಂದು ತುರ್ತುಪರಿಸ್ಥಿತಿ ಹೇರಬೇಡಿ. ಇದು ಮುಂದುವರಿದರೆ ಎಲ್ಲ ಜಿಲ್ಲೆಗಳ ಕವಿಗಳು ಸೇರಿ ಜೈಲ್ ಭರೋ ಮಾಡಬೇಕಾದೀತು’ ಎಂದು ಎಚ್ಚರಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಾನೂ ಸಿರಾಜ್‌ಬಿಸರಳ್ಳಿ, ನಾನು ಕೆ.ನೀಲಾ, ನಾನು ಆರ್.ಕೆ ಹುಡಗಿ. ಬನ್ನಿ ಮೊದಲು ನಮ್ಮನ್ನು ಬಂಧಿಸಿ’ ಎಂದು ಗುಡುಗಿದರು.
‘ಸಿರಾಜ್ ಅವರು ಬರೆದದ್ದು ಕವಿತೆ ಆಗಿತ್ತು ಅಷ್ಟೆ. ಅದು ಚರಿತ್ರೆಯಲ್ಲ, ಧರ್ಮಗ್ರಂಥವಾಗಿರಲಿಲ್ಲ, ಅದು ವರದಿಯಾಗಿರಲಿಲ್ಲ. ನಾನು ಪೊಲೀಸರನ್ನು ಪ್ರಶ್ನೆ ಮಾಡುವುದಿಲ್ಲ. ಯಾರು ದೂರು ಕೊಟ್ಟರೂ ಅವರು ಎಫ್‌ಐಆರ್ ದಾಖಲಿಸುತ್ತಾರೆ. ಹಾಗಾಗಿ, ದೂರು ಕೊಟ್ಟವ
ರನ್ನು ನಾನು ಪ್ರಶ್ನೆ ಮಾಡುತ್ತಿದ್ದೇನೆ’ ಎಂದರು.
‘ಕಾವ್ಯ ಎಂದರೆ, ಅದು ಬಹುತ್ವದ ಅಂತಃಕರಣದ ಗಣಿ. ಹೀಗಿರುವಾಗ, ಕವಿಗಳ ಮೇಲೆ, ಕವಿತೆಗಳ ವಿರುದ್ಧ ಎಫ್‌ಐಆರ್ ದಾಖಲಾಗುತ್ತದೆ ಎಂದರೆ ಅದು ದೇಶದ ಸಾಂಸ್ಕೃತಿಕ ಲೋಕದ ಮೇಲೆ ಎಫ್‌ಐಆರ್ ದಾಖಲಿಸಿದಂತೆ’ ಎಂದು ಅಭಿಪ್ರಾಯಪಟ್ಟರು.
‘ಇಂದು ನಮ್ಮ ಕವಿಗಳಿಗೆ ಕಾಡುತ್ತಿರುವುದು ಜಾಗತೀಕರಣ, ಚಾತುರ್ವರ್ಣ, ಎನ್‌ಆರ್‌ಸಿ ಅಂಥ ಸುಡುವ ಸಮಸ್ಯೆಗಳು. ಇದರ ಮಧ್ಯೆ ಕವನ ಬರೆಯಬಾರದು ಎಂದರೆ ಹೇಗೆ? ಹಾಗಾದರೆ, ಯಾವುದರ ಬಗ್ಗೆ ಕವಿತೆ ಬರೆಯಬೇಕು’ ಎಂದು ಪ್ರಶ್ನಿಸಿದರು.
‘ಹಿಂದುತ್ವದ ಹೆಸರಿನಲ್ಲಿ ಪ್ರಜ್ಞಾವಂತರನ್ನು ಹಿಂದೂ ವಿರೋಧಿಗಳು ಎಂದು ಕರೆಯುತ್ತೀರಿ. ಆದರೆ, ನಾವುಗಳೇ ನಿಜವಾದ ಹಿಂದೂಗಳು ಮತ್ತು ರಾಮನ ಭಕ್ತರು. ನಮ್ಮ ರಾಮ ಶೂದ್ರ ತಪಸ್ವಿಯ ಪಾದಕ್ಕೆ ಬಿದ್ದವನೇ ಹೊರತು ಬಿಲ್ಲು ಬಾಣ ಹಿಡಿದವನು ಅಲ್ಲ’ ಎಂದು ಕಿಡಿ ಕಾರಿದರು.
‘ನಾವು ಕವಿಗಳು ಜಾತಿ, ಧರ್ಮಗಳ ನಡುವೆ ಸೇತುವೆಗಳನ್ನು ಕಟ್ಟಬೇಕು’ ಎಂದು ಚಿಂತಕ ರಂಗರಾಜ ವನದುರ್ಗ ಕರೆ ನೀಡಿದರು.
‘ಅಮ್ಮನ ಸೀರೆ, ತಂದೆಯ ಲುಂಗಿ, ತಂಗಿಯ ಲಂಗದಿಂದ ಕೌದಿ ಹೊಲಿಯುತ್ತಾರೆ. ಇಂದು ಕೌದಿಗೆ ಬದಲು ಚಾದರ ಬಂದಿದೆ. ಆದರೆ, ನಾವು ರಚಿಸುವ ಕಾವ್ಯ ಕೌದಿ ಆಗಿ ಎಲ್ಲರನ್ನು ಒಳಗೊಳ್ಳಬೇಕು, ಚಾದರ ಆಗಬಾರದು. ನಾವು ಸಮಾಜದ ಶಿಶುಗಳು. ಆದ್ದರಿಂದ ನಮ್ಮ ಕಾವ್ಯಕ್ಕೆ ಸಾಮಾಜಿಕ ಜವಾಬ್ದಾರಿ ಇರಬೇಕು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.