ಕೊಪ್ಪಳ: ರಾಜ್ಯ ಸರ್ಕಾರದ ವಿರುದ್ಧ ಆರಂಭದಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ನೇಮಿಸಲಾಗಿದೆ. ಈ ಮೂಲಕ ಸಿ.ಎಂ. ಅವರ ರಾಯರಡ್ಡಿ ಮುನಿಸು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಶುಕ್ರವಾರ ಆದೇಶ ಹೊರಡಿಸಿರುವ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ನೇಮಕ ಮಾಡಿದೆ.
ರಾಯರಡ್ಡಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೂ ಆಗಿದ್ದರಿಂದ ಅವರು ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪ್ರಮುಖ ಖಾತೆಯ ಸಚಿವ ಸ್ಥಾನಮಾನ ಸಿಗುತ್ತದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರಿಗೆ ಯಾವುದೇ ಸ್ಥಾನ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಅವರು ಮೇಲಿಂದ ಮೇಲೆ ಸರ್ಕಾರಕ್ಕೆ ಪತ್ರ ಬರೆಯುತ್ತಲೇ ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಸಚಿವರು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ನನಗಿಂತ ಕಿರಿಯರು ಸಚಿವರಾಗಿದ್ದಾರೆ ಎಂದು ಹಿಂದೆ ರಾಯರಡ್ಡಿ ಅಸಮಾಧಾನ ಹೊರಹಾಕಿದ್ದರು. ಇತ್ತೀಚೆಗೆ ಪಕ್ಷದ ವರಿಷ್ಠರು ನಿಗಮ ಮಂಡಳಿ ಸ್ಥಾನಮಾನ ನೀಡುವುದಾಗಿ ಹೇಳಿದ್ದರೂ ನಯವಾಗಿ ತಿರಸ್ಕರಿಸಿದ್ದರು. ಈಗ ಸರ್ಕಾರ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ನೇಮಿಸಿದೆ.
ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ರಾಯರಡ್ಡಿ ‘ನನಗೆ ಯಾರ ಬಗ್ಗೆಯೂ ಅಸಮಾಧಾನವಿರಲಿಲ್ಲ. ಕ್ಷೇತ್ರದ ಕೆಲಸ ಮಾಡಿಕೊಂಡು ಹೋಗುತ್ತಿದ್ದೆ. ಈಗ ಮುಖ್ಯಮಂತ್ರಿಯೇ ಜವಾಬ್ದಾರಿ ನೀಡಿದ್ದಾರೆ. ಕೊಟ್ಟ ಕೆಲಸವನ್ನು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವೆ. ಅವಕಾಶ ಕೊಟ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷರಿಗೆ ಧನ್ಯವಾದಗಳು’ ಎಂದು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.