ಬೆಂಗಳೂರು: ‘ಆಡಳಿತದಲ್ಲಿ ಸುಧಾರಣೆ ಆಗಬೇಕೆಂದು ಮುಖ್ಯಮಂತ್ರಿಗೆ ಪತ್ರಗಳನ್ನು ಬರೆದಿದ್ದೆ. ಇನ್ನು ಮುಂದೆಯೂ ಬರೆಯುತ್ತೇನೆ’ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮನುಷ್ಯ ಅಂದಮೇಲೆ ಸಚಿವ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ನನಗೆ ಸಚಿವ ಸ್ಥಾನ ಕೊಡಬೇಕಿತ್ತು. ಕೊಟ್ಟಿಲ್ಲವೆಂದು ಕಾಂಗ್ರೆಸ್ ಸರ್ಕಾರ ಅಥವಾ ಸಿದ್ದರಾಮಯ್ಯ ಮೇಲೆ ನನಗೆ ಯಾವುದೇ ಸಿಟ್ಟು ಇಲ್ಲ. ಅದು ಅವರ ನಿರ್ಧಾರ ಅಷ್ಟೆ’ ಎಂದರು.
‘ನಾನು ಸ್ವಾಭಿಮಾನದಿಂದ ಬದುಕುವವನು. ಅಲ್ಲೊಂದು ಇಲ್ಲೊಂದು ಮಾತನಾಡುವುದಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಪತ್ರಗಳನ್ನು ಬರೆದಿದ್ದೇನೆ. ಅದರಲ್ಲಿ ತಪ್ಪೇನಿದೆ? ಅಸಮಾಧಾನದಿಂದಿರುವ ಯಾವ ಶಾಸಕರ ನಾಯಕತ್ವವನ್ನು ನಾನು ವಹಿಸುವುದಿಲ್ಲ. ಪಕ್ಷವನ್ನೂ ತೊರೆಯುವುದಿಲ್ಲ. ಇಲ್ಲಿ (ಕಾಂಗ್ರೆಸ್) ಸಂತೋಷವಾಗಿದ್ದೇನೆ’ ಎಂದರು.
ಅಧಿಕಾರಿಯೂ ಸ್ಪಂದಿಸದ ಕಾರಣ ಸಿಎಂಗೆ ಪತ್ರ: ‘ಕಲಬುರಗಿ ವಿಭಾಗದಲ್ಲಿ ಮಳೆಯಾಗದೆ ರೈತರು ಆತಂಕದಲ್ಲಿದ್ದಾರೆ. ಇದರಿಂದ ಬೇರೆ ಬೇರೆ ಸಮಸ್ಯೆಗಳಾಗುತ್ತಿದೆ. ಕೊಪ್ಪಳ ಜಿಲ್ಲಾ ಅಧಿಕಾರಿಯನ್ನು ಕರೆದರೂ ಬಂದಿಲ್ಲ. ಯಾವ ಅಧಿಕಾರಿಯೂ ಸ್ಪಂದಿಸಲಿಲ್ಲ. ಹೀಗಾಗಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ತಕ್ಷಣ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕರೆ ಮಾಡಿ ಅಧಿಕಾರಿಗಳ ಸಭೆ ಕರೆದಿದ್ದೇನೆ ಎಂದಿದ್ದಾರೆ. ಆಡಳಿತದಲ್ಲಿ ಸುಧಾರಣೆ ಆಗಬೇಕೆಂದರೆ ಪತ್ರ ಬರೆಯಲೇಬೇಕು’ ಎಂದರು.
ಶಾಸಕರ ಅಹವಾಲು ಆಲಿಸಲು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಈ ಹಿಂದೆ ಬಸವರಾಜ ರಾಯರಡ್ಡಿ ಪತ್ರ ಬರೆದಿದ್ದರು. ಸೆ. 2ರಂದು ಮತ್ತೆ ಪತ್ರ ಬರೆದು, ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಜೊತೆ ಸಭೆ ನಡೆಸುವಂತೆ ಮನವಿ ಮಾಡಿದ್ದರು. ಕಲಬುರಗಿ ವಿಭಾಗದಲ್ಲಿ ಕೊಪ್ಪಳ, ಕಲಬುರ್ಗಿ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ, ಮತ್ತು ವಿಜಯನಗರ ಜಿಲ್ಲೆಗಳು ಬರುತ್ತಿದ್ದು, ಎಲ್ಲ ಜಿಲ್ಲೆಗಳಿಗೆ ಜೆಸ್ಕಾಂ ವತಿಯಿಂದ ರೈತರ ಜಮೀನುಗಳ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಸಲು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.