ADVERTISEMENT

ಬ್ಯಾಂಕಿಂಗ್ ವಂಚನೆ ತಡೆಗೆ ಹೊಸಹೆಜ್ಜೆ

ದೂರು ಸಲ್ಲಿಕೆಗೆ ವಾಟ್ಸ್‌ಆ್ಯಪ್ ಸಂಖ್ಯೆ: ಸಚಿವ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 18:27 IST
Last Updated 10 ಸೆಪ್ಟೆಂಬರ್ 2020, 18:27 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಬ್ಯಾಂಕಿಂಗ್ ವಲಯದಲ್ಲಿ ಆಗುತ್ತಿರುವ ವಂಚನೆಗಳನ್ನು ತಡೆಯಲು ಸಮನ್ವಯ ಸಮಿತಿ ರಚಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ ಈ ಸಮಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದವರು, ಮಾಹಿತಿ ತಂತ್ರಜ್ಞಾನ (ಐಟಿ) ತಜ್ಞರು, ಹಿರಿಯ ಪೊಲೀಸ್ ಅಧಿಕಾರಿಗಳು ಇರುತ್ತಾರೆ’ ಎಂದರು.

‘ಡೆಬಿಟ್, ಕ್ರೆಡಿಟ್ ಕಾರ್ಡ್ ಮೋಸ, ನಕಲಿ ಕಸ್ಟಮರ್ ಕೇರ್ ಕರೆ ತಡೆಗೆ ಏಕಗವಾಕ್ಷಿ ಪದ್ಧತಿ ಜಾರಿಗೆ ತರಲಾಗುವುದು. ವಂಚನೆಗೆ ಒಳಗಾದವರು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದರೆ ದೂರು ದಾಖಲಿಸಿಕೊಳ್ಳಲಾಗುವುದು. ಇದಕ್ಕಾಗಿ ಶೀಘ್ರದಲ್ಲಿ ವಾಟ್ಸ್‌ಆ್ಯಪ್ ನಂಬರ್ ನೀಡಲಾಗುವುದು. ಅಲ್ಲದೆ, ಸಮಿತಿ ನೀಡುವ ಸಲಹೆಗಳನ್ನು ಆಧರಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ವಿವರಿಸಿದರು.

ADVERTISEMENT

‘ಜನರ ಹಣ ಬ್ಯಾಂಕ್‌ ಖಾತೆಯಲ್ಲಿ ಸುರಕ್ಷಿತವಾಗಿರಬೇಕಾಗಿದೆ. ಈ ಕಾರಣಕ್ಕೆ ಬ್ಯಾಂಕ್‌ನಿಂದ ಬ್ಯಾಂಕ್, ಬ್ಯಾಂಕ್‌ನಿಂದ ಗ್ರಾಹಕರಿಗೆ ಮಾಹಿತಿ ಪರಸ್ಪರ ಹಂಚಿಕೆ
ಯಾಗಬೇಕು. ಬ್ಯಾಂಕ್‌ಗಳು ಡಿಜಿಟಲೀಕರಣಗೊಂಡ ಬಳಿಕ ವಂಚನೆ ಪ್ರಕರಣಗಳು ಹೆಚ್ಚಿವೆ. ಸರ್ಕಾರದ ಖಾತೆಯಿಂದಲೂ ಮೋಸದಿಂದ ಹಣ ವರ್ಗಾವಣೆ ಮಾಡಲಾಗುತ್ತದೆ. ಎಪಿಎಂಸಿ ಖಾತೆಯಿಂದಲೇ ₹ 47ಕೋಟಿ ವಂಚಿಸಲಾಗಿದೆ. ಈ ವಿಷಯವನ್ನು ಸಭೆಯಲ್ಲಿ ಚರ್ಚಿಸಿದ್ದೇವೆ.

‘ಬ್ಯಾಂಕ್‌ಗಳು ಹಾಗೂ ಗ್ರಾಹಕರ ಮಾಹಿತಿಗಳು ಸೋರಿಕೆಯಾಗುತ್ತಿವೆ. ಈ ಬಗ್ಗೆ ಹಣಕಾಸು ಇಲಾಖೆ, ಸಿಐಡಿ, ಕಾನೂನು ತಜ್ಞರು, ಆರ್‌ಬಿಐ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ವಿಚಾರ ವಿನಿಮಯ ನಡೆಸಿದ್ದೇನೆ. ವಂಚನೆ ತಡೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಬ್ಯಾಂಕ್‌ಗಳು ಅಳವಡಿಸಿಕೊಳ್ಳುವುದು, ನಿಯಮಗಳನ್ನು ಜಾರಿ ಮಾಡುವ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದೂ ಬೊಮ್ಮಾಯಿ ವಿವರಿಸಿದರು.

ಡಿಜಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸಭೆಯಲ್ಲಿದ್ದರು.

***

ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರಿಗೆ ಆಗುತ್ತಿರುವ ವಂಚನೆ ತಡೆಯಲು ಆರ್‌ಬಿಐ, ಪೊಲೀಸ್‌, ಐ.ಟಿ ಎಲ್ಲ ಕ್ಷೇತ್ರದವರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.