ADVERTISEMENT

ಅರ್ಜಿದಾರ ಮಹಾನುಭಾವ ಯಾರು?: ಹೈಕೋರ್ಟ್‌

ವಿಲಕ್ಷಣ ಬೇಡಿಕೆಯ ಪಿಐಎಲ್‌ಗೆ ಹೈಕೋರ್ಟ್‌ ತವಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:09 IST
Last Updated 24 ಅಕ್ಟೋಬರ್ 2024, 0:09 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸುವುದು ಬೇಡ. ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಎಲ್ಲಾ ರಾಜಕೀಯ ಪಕ್ಷಗಳೂ ಒಟ್ಟಾಗಿ ಸೇರಿ ನನ್ನನ್ನೇ ಮಧ್ಯಂತರ ಮೇಯರ್ ಆಗಿ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿಕೊಳ್ಳಲು ಇವರಿಗೆಲ್ಲಾ ನಿರ್ದೇಶಿಸಬೇಕು’ ಎಂದು ಕೋರಲಾದ ವಿಲಕ್ಷಣ ಬೇಡಿಕೆಯೊಂದಕ್ಕೆ ಹೈಕೋರ್ಟ್‌ ಹುಬ್ಬೇರಿಸಿದೆ. ಇಂತಹ ಅರ್ಜಿ ಸಲ್ಲಿಸಿರುವ ಮಹಾನುಭಾವ ಯಾರೆಂಬುದನ್ನು ಕಣ್ಣಾರೆ ಕಾಣುವ ತವಕ ವ್ಯಕ್ತಪಡಿಸಿದೆ!

‘ಹೊಸ ಬಿಬಿಎಂಪಿ ಹಾಗೂ ವಾರ್ಡ್‌ ನಂಬರ್ 42ರ ತಂದೆ’ ಎಂದು ಸ್ವಯಂ ಘೋಷಿಸಿಕೊಂಡಿರುವ ನಗರದ ಲ್ಯಾವೆಲ್ಲೆ ರಸ್ತೆ ನಿವಾಸಿಯಾದ 66 ವರ್ಷದ ಮುರಳಿ ಕೃಷ್ಣ ಬ್ರಹ್ಮಾನಂದಂ ಎಂಬುವರು 2022ರಲ್ಲಿ ಸಲ್ಲಿಸಿರುವ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ಅರ್ಜಿಯನ್ನು ವಿಚಾರಣೆಗೆ ಕೂಗಿದಾಗ ಅರ್ಜಿದಾರರು ಹಾಜರಿರಲಿಲ್ಲ. ಏತನ್ಮಧ್ಯೆ ಸರ್ಕಾರದ ಪರ ವಕೀಲರು, ‘ಅರ್ಜಿಯಲ್ಲಿನ ಅಂಶಗಳು ಮತ್ತು ಮನವಿ ಅಸಂಬಂದ್ಧವಾಗಿವೆ. ಹಾಗಾಗಿ, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸದೆ ವಜಾಗೊಳಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಲ್ಲ ನಾವು ಅರ್ಜಿಯನ್ನು ವಜಾ ಮಾಡುವುದಿಲ್ಲ. ಈ ಅರ್ಜಿ ಸಲ್ಲಿಸಿರುವ ಮಹಾನುಭಾವ ಯಾರು ಎಂಬುದನ್ನು ನೋಡಬೇಕಿದೆ’ ಎಂದು ಹೇಳಿ ವಿಚಾರಣೆ ಮುಂದೂಡಿತು.

ಏನಿದು ಅರ್ಜಿ?:

‘ಬಿಬಿಎಂಪಿ ಚುನಾವಣೆ ವಿಳಂಬ, ವಾರ್ಡ್‌ ಮರು ವಿಂಗಡಣೆ, ಬಿಬಿಎಂಪಿ ಕಾಯ್ದೆ-2020... ಇವೆಲ್ಲವೂ ಅವೈಜ್ಞಾನಿಕವಾಗಿವೆ’ ಎಂದು ದೂರಿರುವ ಅರ್ಜಿದಾರರು ಬಿಬಿಎಂಪಿ ಭೂಪ್ರದೇಶವನ್ನು ಸ್ತ್ರೀಲಿಂಗಕ್ಕೆ ಹೋಲಿಕೆ ಮಾಡಿದ್ದು, ‘ಆಕೆಗೆ’ ನ್ಯಾಯ ಸಿಗಬೇಕು ಎಂದು ಅರ್ಜಿಯಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

‘ನನ್ನ ಮನವಿ ಅಸ್ಪಷ್ಟವೂ ಅಲ್ಲ, ಅವೈಜ್ಞಾನಿಕವೂ ಅಲ್ಲ, ಕಾನೂನು ಬಾಹಿರವೂ ಅಲ್ಲ, ದುರದ್ದೇಶಪೂರಿತವೂ ಅಲ್ಲ. ಆದ್ದರಿಂದ, ಬಿಬಿಎಂಪಿಗೆ ಚುನಾವಣೆ ನಡೆಸಬಾರದು ಎಂದು ಸರ್ಕಾರ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು. ಜತೆಗೆ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಸೇರಿ ನನ್ನನ್ನು ಮಧ್ಯಂತರ ಮೇಯರ್ ಆಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿಕೊಳ್ಳಲು ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

2023ರ ವಿಧಾನಸಭೆ ಚುನಾವಣೆ ವೇಳೆಯೂ ಇಂತಹದ್ದೇ ಅರ್ಜಿ ಸಲ್ಲಿಸಿದ್ದ ಇದೇ ಅರ್ಜಿದಾರರು, ವಿಧಾನಸಭೆ ಚುನಾವಣೆ ನಡೆಸದೆ, ನನ್ನನ್ನೇ ಕರ್ನಾಟಕ ಪ್ರತಿನಿಧಿಯನ್ನಾಗಿ ನೇಮಕ ಮಾಡುವಂತೆ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.