ಬೆಂಗಳೂರು: ‘ಸಭೆ, ಸಮಾರಂಭ ಹಾಗೂ ಜಾತ್ರೆಗಳನ್ನು ನಡೆಸದಂತೆ ಸರ್ಕಾರವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಸಿದ್ಧ ಕರಗ ಉತ್ಸವವನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೂತನ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ನಿರ್ಗಮಿತ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಂದ ಗುಪ್ತ ‘ಅಧಿಕಾರ ದಂಡ’ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು ‘ಸರ್ಕಾರವು ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ನೀಡಿದೆ. ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆಡಳಿತಾಧಿಕಾರಿಯಾಗಿ ನಾನು ಎಲ್ಲಾ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಗತ್ಯ ಸಲಹೆ, ಸೂಚನೆಗಳನ್ನೂ ನೀಡಿದ್ದೆ. ಕೋವಿಡ್ ಎರಡನೇ ಅಲೆ ಶುರುವಾಗಿದೆ. ಇದನ್ನು ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುತ್ತೇನೆ’ ಎಂದರು.
‘ಕೋವಿಡ್‌ಗೆ ಕಡಿವಾಣ ಹಾಕಲು ಈಗಾಗಲೇ ಸಾಕಷ್ಟು ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ. ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತೇನೆ. ನಮ್ಮ ಈ ಕಾರ್ಯಕ್ಕೆ ನಾಗರಿಕರು ಕೈ ಜೋಡಿಸಬೇಕು’ ಎಂದು ತಿಳಿಸಿದರು.
‘ಕೆಲವು ಕಡೆ ರಸ್ತೆಯೊಂದರಲ್ಲಿ ಹತ್ತಕ್ಕಿಂತಲೂ ಹೆಚ್ಚು ಬಸ್ ನಿಲ್ದಾಣಗಳಿವೆ ಎಂಬುದು ಗಮನಕ್ಕೆ ಬಂದಿದೆ. ಅನಧಿಕೃತವಾಗಿ ನಿರ್ಮಾಣ ಮಾಡಿದ್ದರೆ ಅಂತಹುಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತದೆ’ ಎಂದರು.
ಬಿಬಿಎಂಪಿ ನೂತನ ಆಡಳಿತಾಧಿಕಾರಿ ರಾಕೇಶ್ ಸಿಂಗ್ ‘ಮಳೆಗಾಲ ಸಮೀಪಿಸುತ್ತಿದೆ. ಅಷ್ಟರೊಳಗೆ ಕೊರೊನಾ ನಿಯಂತ್ರಿಸಬೇಕಾದ ಸವಾಲು ನಮ್ಮ ಎದುರಿಗಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.
ಭಾವುಕರಾದ ಮಂಜುನಾಥ್ ಪ್ರಸಾದ್: ‘ಹಿಂದಿನ ಏಳು ತಿಂಗಳಿಂದ ನಾನು ಗೌರವ್ ಗುಪ್ತ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ. ಬಿಬಿಎಂಪಿಯ ಹಲವು ಸಮಸ್ಯೆಗಳಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು. ಅವರಿಗೆ ನನಗಿಂತಲೂ ಹೆಚ್ಚಿನ ಅನುಭವವಿದೆ. ಬೆಂಗಳೂರಿನ ಜನ ನನಗಿಂತಲೂ ಉತ್ತಮ ಆಡಳಿತವನ್ನು ಗುಪ್ತ ಅವರಿಂದ ನಿರೀಕ್ಷಿಸಬಹುದು. ಅದನ್ನು ಅವರು ಹುಸಿ ಮಾಡುವುದಿಲ್ಲ’ ಎಂದು ಹೇಳುವಾಗ ಅವರು ಭಾವುಕರಾದರು. ಕಣ್ಣುಗಳು ಹನಿಗೂಡಿದವು.
‘45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ವಿಚಾರವಾಗಿ ಬುಧವಾರ ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದೇವೆ. ಪ್ರತಿ ದಿನ 85 ಸಾವಿರ ಜನರಿಗೆ ಲಸಿಕೆ ನೀಡಲು ನಿರ್ಧರಿಸಿದ್ದು ಅದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಕೇಂದ್ರ ಸರ್ಕಾರವು ಉಪ ಕೇಂದ್ರಗಳಲ್ಲೂ (ಐಟಿ ಕಂಪನಿ, ಕಾರ್ಖಾನೆ) ಲಸಿಕೆ ನೀಡಲು ಅವಕಾಶ ಕೊಟ್ಟಿದೆ. ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿರುವ ಆರೋಗ್ಯ ಕೇಂದ್ರಗಳನ್ನು ಬಳಸಿಕೊಂಡು ಲಸಿಕೆ ನೀಡುವುದಾಗಿ ಖಾಸಗಿ ಆಸ್ಪತ್ರೆಯವರು ಹೇಳಿದ್ದಾರೆ. ಹೆಚ್ಚಿನ ಲಸಿಕೆ ಪೂರೈಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ನಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.