ಬೆಂಗಳೂರು: ಇದೇ 23 ರಿಂದ 9 ರಿಂದ 12 ನೇ ತರಗತಿಗಳು ಆರಂಭವಾಗಲಿದ್ದು, ಅದರ ಪ್ರತಿಕ್ರಿಯೆಯನ್ನು ಆಧರಿಸಿ 1 ರಿಂದ 8 ನೇ ತರಗತಿಗಳನ್ನು ಸೆಪ್ಟಂಬರ್‌ನಿಂದ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
23 ರಿಂದ ಆರಂಭವಾಗುವ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶುಕ್ರವಾರ ವಿಸ್ತೃತ ಎಸ್‌ಒಪಿ(ಪ್ರಮಾಣಿತ ಕಾರ್ಯಚರಣೆ ವಿಧಾನ) ಬಿಡುಗಡೆ ಮಾಡಲಾಗುವುದು ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
1 ರಿಂದ 8 ನೇ ತರಗತಿ ಆರಂಭಿಸಬೇಕು ಎಂಬ ಒತ್ತಡ ಪೋಷಕರಿಂದ ಬರುತ್ತಿದೆ. ತರಗತಿಗಳನ್ನು ಆರಂಭಿಸಬೇಕು ಎಂಬ ಆಲೋಚನೆ ಇದೆ. ಕೋವಿಡ್‌ನಿಂದ ಮಕ್ಕಳಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂದು ಕೋವಿಡ್ ತಾಂತ್ರಿಕ ಸಮಿತಿ ಮತ್ತು ಮಕ್ಕಳ ತಜ್ಞರು ಹೇಳಿದ್ದಾರೆ. 9 ರಿಂದ 12 ತರಗತಿಗಳ ಪ್ರತಿಕ್ರಿಯೆ ಗಮನಿಸಲಾಗುವುದು ಎಂದರು.
1 ರಿಂದ 8 ನೇ ತರಗತಿಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಇದೇ 30 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ನಾಗೇಶ್ ಹೇಳಿದರು.
ಪ್ರೌಢ ಮತ್ತು ಪದವಿ ಪೂರ್ವ ಭೌತಿಕ ತರಗತಿಗಳನ್ನು ಆರಂಭಿಸುವ ಪೂರ್ವಭಾವಿಯಾಗಿ ಶುಕ್ರವಾರ ಶಿಕ್ಷಣ, ಗೃಹ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲು ಉದ್ದೇಶಿಸಲಾಗಿದೆ. 9 ರಿಂದ 12 ನೇ ತರಗತಿ ಮಕ್ಕಳು ಎಸ್ಒಪಿ ಪಾಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರ ನಡವಳಿಕೆಯೂ ಅದಕ್ಕೆ ಪೂರಕವಾಗಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ... ಉಪ ಮುಖ್ಯಮಂತ್ರಿ, ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ: ಬಿ. ವೈ ವಿಜಯೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.