ಬೆಂಗಳೂರು: ಬೆಂಗಳೂರು ನಗರ ವಿಶ್ವವಿಶ್ವದ್ಯಾಲಯ ನಡೆಸುವ ವಿವಿಧ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಕಾರ್ಯ ವೈಖರಿ ವಿವಾದ ಸೃಷ್ಟಿಸಿದೆ.
ವಿಶ್ವವಿದ್ಯಾಲಯ ನಿಗದಿ ಮಾಡಿರುವ ಮೌಲ್ಯಮಾಪನ ಕೇಂದ್ರಗಳಲ್ಲಿ ಅಧ್ಯಾಪಕರು ಮೊಬೈಲ್ ಫೋನ್ ನೋಡುತ್ತಾ, ಮೊಬೈಲ್‌ನಲ್ಲಿ ಮಾತನಾಡುತ್ತಾ, ಕ್ರಿಕೆಟ್ ವೀಕ್ಷಿಸುತ್ತಾ ಮೌಲ್ಯಮಾಪನ ಮಾಡುತ್ತಿರುವ ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನಡೆಸುವ ವಿವಿಧ ವಿಷಯಗಳ ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ಬೇಕಾಬಿಟ್ಟಿಯಾಗಿ, ಮನಸ್ಸಿಗೆ ಬಂದಂತೆ ಮೌಲ್ಯಮಾಪನ ಮಾಡುತ್ತಿರುವ ವಿಡಿಯೊ ದೃಶ್ಯಗಳನ್ನು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಪ್ರಧಾನ ಕಾರ್ಯದರ್ಶಿ ಶ್ರೀಕರ್, ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.
ಇಂತಹ ಕೃತ್ಯಗಳು ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕೇಂದ್ರ ಹಾಗೂ ಎಸ್‌ಜೆಆರ್ ಪದವಿಪೂರ್ವ ಮಹಿಳಾ ಕಾಲೇಜು ಕೇಂದ್ರದಲ್ಲಿ ನಡೆದಿವೆ ಎಂದು ವಿದ್ಯಾರ್ಥಿ ಮುಖಂಡ ಎನ್. ನರೇಂದ್ರ ಆರೋಪಿಸಿದ್ದಾರೆ.
‘ಮೌಲ್ಯಮಾಪನ ಕೇಂದ್ರಗಳಲ್ಲಿ ಒಳ ಪ್ರವೇಶಸುವ ಮತ್ತು ನಿರ್ಗಮಿಸುವ ಹಾಜರಾತಿ, ಉತ್ತರ ಪತ್ರಿಕೆಗಳ ವಿತರಣೆ ಕಾರ್ಯವೂ ಸಮರ್ಪಕವಾಗಿಲ್ಲ. ನಿಯಮದಂತೆ ಒಂದು ದಿನಕ್ಕೆ ಒಬ್ಬ ಮೌಲ್ಯಮಾಪಕರಿಗೆ ನಿಗದಿ ಮಾಡಿದ ಉತ್ತರ ಪತ್ರಿಕೆಗಳಿಗಿಂತ ಶೇ 60ರಷ್ಟು ಹೆಚ್ಚು ಮೌಲ್ಯಮಾಪನ ಮಾಡುತ್ತಿದ್ದಾರೆ. ಕೆಲವರು ಉತ್ತರಗಳನ್ನು ಗಮನಿಸಿದೇ ಅಂಕ ನೀಡುತ್ತಿರುವುದೂ ವಿಡಿಯೊದಲ್ಲಿ ದಾಖಲಾಗಿದೆ. ಈ ಕುರಿತು ಹಿಂದೆಯೂ ದೂರು ನೀಡಿದ್ದೆವು. ವಿಶ್ವವಿದ್ಯಾಲಯ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿಗಳು ಮಾಹಿತಿ ನೀಡಿದ ತಕ್ಷಣ ಪ್ರಧಾನ ಕಾರ್ಯದರ್ಶಿಗೆ ವರದಿ ಕೇಳಿದ್ದೇನೆ. ಇಂತಹ ಪ್ರಕರಣಗಳನ್ನು ಸಹಿಸಲು ಸಾಧ್ಯವಿಲ್ಲಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಇವು ಹಳೆಯ ವಿಡಿಯೊಗಳು, ಗಮನಕ್ಕೆ ಬಂದನಂತರ ಮೌಲ್ಯಮಾಪಕರಿಗೆ ಎಚ್ಚರಿಕೆ ನೀಡಿ, ಘಟನೆ ಮರುಕಳಿಸದಂತೆ ಸೂಚಿಸಲಾಗಿದೆಆನಂದ್ಕುಮಾರ್, ಕುಲಸಚಿವ, ಪರಿಕ್ಷಾಂಗ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.