ADVERTISEMENT

ಬಿ.ಡಿ. ಜತ್ತಿ ಸಾಧನೆ ಹಿಮಾಲಯದಷ್ಟೇ ಎತ್ತರ: ಸಿದ್ಧಲಿಂಗ ಸ್ವಾಮೀಜಿ

ಜನ್ಮದಿನೋತ್ಸವದಲ್ಲಿ ಸಿದ್ಧಲಿಂಗ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 19:30 IST
Last Updated 10 ಸೆಪ್ಟೆಂಬರ್ 2022, 19:30 IST
ಬಸವ ಸಮಿತಿಯ ಹಿರಿಯ ಸದಸ್ಯ ಭೀಮಣ್ಣ ಖಂಡ್ರೆಯವರಿಗೆ ‘ಬಸವ ಕಾರುಣ್ಯ’ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಶಂಕರ ಬಿದರಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ದಿಬ್ಬೂರು ಸಿದ್ದಲಿಂಗಯ್ಯ ಹಾಗೂ ಶಾಸಕ ವೆಂಕಟರಡ್ಡಿ ಮುದ್ನಾಳ್ ಇದ್ದಾರೆ  –ಪ್ರಜಾವಾಣಿ ಚಿತ್ರ
ಬಸವ ಸಮಿತಿಯ ಹಿರಿಯ ಸದಸ್ಯ ಭೀಮಣ್ಣ ಖಂಡ್ರೆಯವರಿಗೆ ‘ಬಸವ ಕಾರುಣ್ಯ’ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಶಂಕರ ಬಿದರಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ದಿಬ್ಬೂರು ಸಿದ್ದಲಿಂಗಯ್ಯ ಹಾಗೂ ಶಾಸಕ ವೆಂಕಟರಡ್ಡಿ ಮುದ್ನಾಳ್ ಇದ್ದಾರೆ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿ.ಡಿ. ಜತ್ತಿಯವರದ್ದು ಇಡೀ ವಿಶ್ವವೇ ಬಲ್ಲಂತಹ ವ್ಯಕ್ತಿತ್ವ. ಅವರ ಸಾಧನೆ ಮತ್ತು ಕೊಡುಗೆ ಹಿಮಾಲಯದಷ್ಟೇ ಎತ್ತರ’ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಶ್ಲಾಘಿಸಿದರು.

ನಗರದಲ್ಲಿ ಶನಿವಾರ ನಡೆದ ಬಸವ ಸಮಿತಿಯ ಸಂಸ್ಥಾಪಕರ ದಿನಾಚರಣೆ, ಡಾ.ಬಿ.ಡಿ. ಜತ್ತಿಯವರ 110ನೇ ಜನ್ಮದಿನೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಿ.ಡಿ. ಜತ್ತಿಯವರು ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ. ಪಂಚಾಯಿತಿ ಸದಸ್ಯನ ಹುದ್ದೆಯಿಂದ ಹಿಡಿದು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಫ.ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ ಮತ್ತು ಬಿ.ಡಿ. ಜತ್ತಿಯವರ ತ್ಯಾಗ ಮತ್ತು ಪರಿಶ್ರಮದಿಂದ ಇಂದು ವಚನಗಳು ನಮಗೆ ಲಭ್ಯವಾಗಿವೆ’ ಎಂದರು.

‘ಫ.ಗು. ಹಳಕಟ್ಟಿಯವರು ವಚನಗಳನ್ನು ಸಂಶೋಧಿಸಿ ಸಂಗ್ರಹಿಸದಿದ್ದರೆ, ಶರಣರ ವಿಚಾರಗಳ ಬಗ್ಗೆ ನಮಗೇನೂ ಸಿಗುತ್ತಿರಲಿಲ್ಲ. ಅವರ ತ್ಯಾಗ, ಪರಿಶ್ರಮದಿಂದ ವಚನ ಧರ್ಮ, ಮಾನವೀಯ ಬದುಕಿಗೆ ಬೇಕಾಗುವಂತಹ ವಚನಗಳ ಸಂವಿಧಾನ ಲಭ್ಯವಾಗಿವೆ’ ಎಂದರು.

ADVERTISEMENT

‘ಹರ್ಡೇಕರ ಮಂಜಪ್ಪನವರು ಗಾಂಧೀಜಿಯವರಿಗೆ ಬಸವಣ್ಣನವರ ವಚನಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ದಾವಣಗೆರೆಯಲ್ಲಿ ನೂರಾರು ವರ್ಷಗಳ ಹಿಂದೆ ಬಸವ ಜಯಂತಿಯನ್ನು ಆಚರಿಸಿದ ಕೀರ್ತಿ ಮೃತ್ಯುಂಜಯಪ್ಪ ಸ್ವಾಮೀಜಿ ಮತ್ತು ಮಂಜಪ್ಪನವರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.

‘ಇದಕ್ಕೊಂದು ಬಹುದೊಡ್ಡ ರೂಪ ಕೊಟ್ಟಿದ್ದು, ಬಿಡಿ ಜತ್ತಿಯವರು. 1964ರಲ್ಲಿ ಬಸವ ಸಮಿತಿ ಸ್ಥಾಪಿಸುವುದರ ಮೂಲಕ ಬಸವ ತತ್ವಗಳನ್ನು ದೇಶದ ಪ್ರತಿಯೊಂದು ಮನೆಗೆ ತಲುಪಿಸುವ ಕೆಲಸ ಮಾಡಿದರು. ಜತೆಗೆ ಬಸವ ಪಥ ಪತ್ರಿಕೆ ಪ್ರಾರಂಭಿಸಿ, ದೇಶದ ವಿವಿಧ ಭಾಷೆಗಳಲ್ಲಿ ಮುದ್ರಿಸಿದರು. ಸದ್ಯ ಅವರು ಹಾಕಿದ ಬೀಜ ವಟವೃಕ್ಷವಾಗಿ ಬೆಳೆದಿದೆ. ದೇಶ–ವಿದೇಶಗಳಲ್ಲಿ ಇದರ ಶಾಖೆಗಳಿವೆ. ಈಗ ಭಾರತದ ಎಲ್ಲಾ ಭಾಷೆಗಳಲ್ಲಿ ವಚನಗಳು ಲಭ್ಯ ಇವೆ’ ಎಂದರು.

ಬಸವ ಪಥ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಮಿತಿಯ ಹಿರಿಯ ಸದಸ್ಯ ಭೀಮಣ್ಣ ಖಂಡ್ರೆಯರಿಗೆ ಬಸವ ಕಾರುಣ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.