ADVERTISEMENT

ಬಿಡಿಎ ಭ್ರಷ್ಟಾಚಾರ| ಉದ್ಯಾನ ಬಿಟ್ಟು ಕಚೇರಿಯಲ್ಲೇ ಠಿಕಾಣಿ ಹೂಡಿದ್ದ ಶಿವಲಿಂಗಯ್ಯ!

₹5 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆ ಹಚ್ಚಿದ ಎಸಿಬಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 15:52 IST
Last Updated 18 ಜೂನ್ 2022, 15:52 IST
ಶಿವಲಿಂಗಯ್ಯ
ಶಿವಲಿಂಗಯ್ಯ   

ಬೆಂಗಳೂರು: ಬಿಡಿಎ ಬಡಾವಣೆಗಳಲ್ಲಿನ ಉದ್ಯಾನಗಳಲ್ಲಿ ಗಿಡ ನೆಟ್ಟು, ಪೋಷಿಸುವ ಕೆಲಸ ಬಿಟ್ಟು ಹಲವು ವರ್ಷಗಳಿಂದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲೇ ಠಿಕಾಣಿ ಹೂಡಿದ್ದ ಶಿವಲಿಂಗಯ್ಯ, ₹ 5 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ‘ಸಂಪಾದಿಸಿ’ರುವುದನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪತ್ತೆಮಾಡಿದೆ.

ಶಿವಲಿಂಗಯ್ಯ ಬಿಡಿಎ ಉದ್ಯಾನ ವಿಭಾಗದ ಸಿಬ್ಬಂದಿ. ಆದರೆ, ಪ್ರಾಧಿಕಾರದ ಬೆಂಗಳೂರು ದಕ್ಷಿಣ ವಲಯದ ಬನಶಂಕರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಕಚೇರಿಯಲ್ಲಿ ದೀರ್ಘ ಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಎಇಇ ಸಹಾಯಕನಾಗಿರುವ ಇವರು, ನಿವೇಶನಗಳ ಖಚಿತ ಅಳತೆ ಪ್ರಮಾಣಪತ್ರ ನೀಡುವುದು, ಬದಲಿ ನಿವೇಶನ ಹಂಚಿಕೆಯಲ್ಲಿ ಹೆಚ್ಚು ‘ಅನುಭವ’ ಹೊಂದಿದ್ದಾರೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

‘ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಬಿಡಿಎ ನಿರ್ಮಿಸಿರುವ ಬಡಾವಣೆಗಳ ಸಮಗ್ರ ಮಾಹಿತಿ ಇವರಿಗೆ ಗೊತ್ತಿದೆ. ಬದಲಿ ನಿವೇಶನ ಕೋರಿದ ಅರ್ಜಿದಾರರಿಗೆ ‘ಮಾರ್ಗದರ್ಶಕ’ನಾಗಿ ಕೆಲಸ ಮಾಡುತ್ತಿದ್ದರು. ನಿಯೋಜನೆ ಮೇಲೆ ಹೋದವರು ಮರಳಿ ಉದ್ಯಾನ ನಿರ್ವಹಣೆ ಕೆಲಸಕ್ಕೆ ಬಂದೇ ಇಲ್ಲ’ ಎಂದು ಮೂಲಗಳು ಹೇಳಿವೆ.

ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಶಿವಲಿಂಗಯ್ಯ ವಿರುದ್ಧ ಪ್ರಕರಣ ದಾಖಲಿಸಿರುವ ಎಸಿಬಿ, ಬೆಂಗಳೂರಿನ ಮೂರು ಸ್ಥಳಗಳಲ್ಲಿ ಶನಿವಾರ ಶೋಧ ನಡೆಸಿತ್ತು. ಇವರ ಬಳಿ ₹ 5 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರ ಅಧಿಕೃತದ ಆದಾಯಕ್ಕೆ ಹೋಲಿಸಿದರೆ ಮೂರು ಪಟ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಾಗಿಲು ತೆರೆಯದೇ ಸತಾಯಿಸಿದ್ದರು: ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದಿದ್ದ ಎಸಿಬಿ ಅಧಿಕಾರಿಗಳು, ಶುಕ್ರವಾರ ನಸುಕಿನಲ್ಲೇ ಶಿವಲಿಂಗ‌ಯ್ಯ ಅವರ ಮನೆಯ ಬಾಗಿಲು ಬಡಿದಿದ್ದರು. ಆದರೆ, ಅರ್ಧ ಗಂಟೆ ಕಾಲ ಬಾಗಿಲು ತೆಗೆಯದೇ ಸತಾಯಿಸಿದ್ದರು. ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸಿಬಿ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಬಾಗಿಲು ತೆರೆದು, ಶೋಧಕಾರ್ಯಕ್ಕೆ ಸಹಕರಿಸಿದರು ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.