ADVERTISEMENT

ಪೋಷಣ್‌ ಆ್ಯಪ್‌ ಹ್ಯಾಕ್‌ ಬಗ್ಗೆ ಎಚ್ಚರವಿರಲಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 15:38 IST
Last Updated 5 ಅಕ್ಟೋಬರ್ 2024, 15:38 IST
<div class="paragraphs"><p>ಲಕ್ಷ್ಮಿ ಹೆಬ್ಬಾಳಕರ</p></div>

ಲಕ್ಷ್ಮಿ ಹೆಬ್ಬಾಳಕರ

   

ಬೆಳಗಾವಿ: ‘ಪೋಷಣ್‌ ಟ್ರ್ಯಾಕರ್‌ ಆ್ಯಪ್‌ ಹ್ಯಾಕ್‌ ಮಾಡುತ್ತಿರುವ ಮಾಹಿತಿ ಸಿಕ್ಕಿದ್ದು, ರಾಜ್ಯದ ಗರ್ಭಿಣಿಯರು ಮತ್ತು ಬಾಣಂತಿಯರು ಸೈಬರ್ ವಂಚಕರಿಂದ ಎಚ್ಚರದಿಂದ ಇರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೋಷಣ್‌ ಆ್ಯಪ್‌ನಲ್ಲಿ ಅಂಗನವಾಡಿ ಕೇಂದ್ರಗಳ ಮಕ್ಕಳ ಹಾಜರಾತಿ, ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ, ಅವರಿಗೆ ಬಿಡುಗಡೆಯಾದ ಹಣ ಮತ್ತಿತರ ವಿವರ ಹಾಕಿರುತ್ತೇವೆ. ಇದನ್ನೇ ಬಳಸಿಕೊಂಡು ಕೆಲವು ವಂಚಕರು ಲಿಂಕ್‌ ಸಿದ್ಧಪಡಿಸಿ ನಿಮಗೆ ಕಳುಹಿಸುತ್ತಾರೆ. ಅದನ್ನು ಕ್ಲಿಕ್‌ ಮಾಡಿದರೆ ನಿಮ್ಮ ಖಾತೆಯಿಂದ ಹಣ ಎತ್ತುತ್ತಾರೆ. ಇಂಥದರ ಬಗ್ಗೆ ಎಚ್ಚರ ವಹಿಸಿ’ ಎಂದರು.

ADVERTISEMENT

‘ವಂಚನೆ ಪ್ರಕರಣ ಗೊತ್ತಾಗುತ್ತಲೇ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಜತೆಗೆ 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೂಲಕವೂ ಸಂದೇಶ ಕಳುಹಿಸಿ, ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.

‘ಬೆಳಗಾವಿಯಲ್ಲಿ ಐವರು ಮಹಿಳೆಯರ ಖಾತೆಗಳನ್ನು ಹ್ಯಾಕ್‌ ಮಾಡಿ ₹82 ಸಾವಿರ ಎತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಿಂದಲೂ ದೂರು ದಾಖಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಕೂಡ ಸ್ಪಷ್ಟಪಡಿಸಿದ್ದಾರೆ.

ವಿಷಯಾಂತರವಿಲ್ಲ: ‘ಮುಡಾ ಹಗರಣ ವಿಷಯಾಂತರ ಮಾಡುವ ಸಲುವಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಸುಳ್ಳು. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಚಿವೆ ತಿರುಗೇಟು ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.