ADVERTISEMENT

ದ್ವೇಷ ಬಿಟ್ಟು ಒಗ್ಗಟ್ಟಾಗಿದ್ದರೆ ನಿಮ್ಮ ಮೇಲೆ ಯಾರೂ ‘ಕೈ’ ಎತ್ತುವುದಿಲ್ಲ: ಖರ್ಗೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 10:58 IST
Last Updated 31 ಅಕ್ಟೋಬರ್ 2024, 10:58 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

(ಪಿಟಿಐ ಚಿತ್ರ)

ಬೆಂಗಳೂರು: ‘ಯಾರಿಗಾದರೂ ನೋವಾದರೆ ಎಲ್ಲರೂ ಒಟ್ಟಾಗಬೇಕು. ಖುಷಿ ಪಡುವುದನ್ನು ಮೊದಲು ಬಿಡಿ. ಒಗ್ಗಟ್ಟಿದ್ದರೆ ಮಾತ್ರ ಖುಷಿ’ ಎಂದು ರಾಜ್ಯ ‘ಕೈ’ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.

ADVERTISEMENT

ಇಂದಿರಾಗಾಂಧಿ ಅವರ ಪುಣ್ಯ ಸ್ಮರಣೆ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಏನಾದರೂ ಆದರೆ ಇನ್ನೊಬ್ಬರು ಖುಷಿ ಪಡುವುದು, ಶಿವಕುಮಾರ್​​ ಅವರಿಗೆ ಏನಾದರೂ ಆದರೆ ಮತ್ತೊಬ್ಬರು ಖುಷಿ ಪಡುವುದನ್ನು ಬಿಡಬೇಕು. ಏನೇ ಆದರೂ ಒಗ್ಗಟ್ಟಾಗಿರಬೇಕು’ ಎಂದರು.

‘ಒಬ್ಬರನ್ನು ಕಂಡರೆ ಮತ್ತೊಬ್ಬರು ಉರಿದುಕೊಳ್ಳಬೇಡಿ. ನಿಮ್ಮನ್ನು ಅಟ್ಟಕ್ಕೇರಿಸಿ ಪಕ್ಷ ಹಾಳು ಮಾಡುವವರಿದ್ದಾರೆ. ಅವರು ಹೇಳಿದಂತೆ ಕೇಳಿದರೆ ಪಕ್ಷವೇ ಒಡೆದು ಹೋಗುತ್ತದೆ.‌ ಮೊದಲು ನೀವು ಎಚ್ಚೆತ್ತುಕೊಳ್ಳಿ. ಒಗ್ಗಟ್ಟಿನಿಂದ ಎಲ್ಲರೂ ಹೋರಾಟ ಮಾಡಿದರೆ ಪಕ್ಷ ಬಲಗೊಳ್ಳುತ್ತದೆ. ಎಲ್ಲರೂ ಒಂದಾಗಿದ್ದರೆ ಯಾರೂ ನಿಮ್ಮ‌ ಮೇಲೆ ಕೈ ಎತ್ತುವುದಿಲ್ಲ’ ಎಂದರು. 

‘ರಾಜ್ಯ ರಾಜಕಾರಣದ ವಿಚಾರದಲ್ಲಿ ನಾನು ಕೈ ಹಾಕುವುದಿಲ್ಲ. ಏನೇ ಕೇಳಿದರೂ ರಾಜ್ಯದ ನಾಯಕರನ್ನು ಕೇಳಿ ಎಂದು ಹೇಳುತ್ತೇನೆ. ನಾನೇನಾದರೂ ಮಾತನಾಡಿದರೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಅದಕ್ಕೆ ನಾನು ಏನೂ‌ ಮಾತನಾಡುವುದಿಲ್ಲ. ಇಲ್ಲಿ ನೀವೇ ಬಗೆಹರಿಸಿಕೊಳ್ಳಬೇಕು’ ಎಂದು ಖರ್ಗೆ ಸಲಹೆ ನೀಡಿದರು.

ಬಜೆಟ್ ಇದ್ದಷ್ಟು ‘ಗ್ಯಾರಂಟಿ’ ಕೊಡಿ: 

ಗ್ಯಾರಂಟಿ ಬಗ್ಗೆ ಡಿ.ಕೆ. ಶಿವಕುಮಾರ್‌ ಬುಧವಾರ ನೀಡಿದ್ದ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಖರ್ಗೆ, ‘ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ನೀನೇನೋ‌ ಹೇಳಿರುವೆ’ ಎಂದು ಪಕ್ಕದಲ್ಲಿದ್ದ ಡಿ.ಕೆ. ಶಿವಕುಮಾರ್ ಕಡೆ ತಿರುಗಿ ಕೇಳಿದರು.

ಆಗ ಡಿ.ಕೆ. ಶಿವಕುಮಾರ್, ‘ನಾನು ಏನೂ‌ ಹೇಳಿಲ್ಲ’ ಎಂದರು. ಆಗ ಖರ್ಗೆ, ‘ನೀನು ಪತ್ರಿಕೆ ನೋಡಿಲ್ಲ. ನಾನು ನೋಡುತ್ತೇನೆ. ಪತ್ರಿಕೆಯಲ್ಲಿ ನೀನು ಹೇಳಿದೆ ಎಂದು ಬಂದಿದೆ’ ಎಂದರು.

ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ‘ಇಲ್ಲ.. ಪರಿಷ್ಕರಣೆ ಎಂದು ಹೇಳಿದ್ದಾರೆ’ ಎಂದರು. ‘ಪರಿಷ್ಕರಣೆ ಮಾಡುತ್ತೇವೆ ಅಂದಿದ್ದಕ್ಕೆ ಈಗ ಎಲ್ಲರೂ ಅನುಮಾನ ಪಡುತ್ತಾರಲ್ಲ’ ಎಂದು ಖರ್ಗೆ ಪ್ರತಿಕ್ರಿಯಿಸಿದರು.

‘ನಿಮ್ಮ ಗ್ಯಾರಂಟಿಯನ್ನು ನಾವು ಮಹಾರಾಷ್ಟ್ರದಲ್ಲಿ ಅನುಕರಿಸುತ್ತಿದ್ದೇವೆ. ಐದು, ಆರು, ಹತ್ತು ಗ್ಯಾರಂಟಿ ಎಂದು ಘೋಷಿಸದಂತೆ ಅವರಿಗೆ ಹೇಳಿದ್ದೇವೆ. ನಿಮ್ಮಲ್ಲಿ ಏನು ಬಜೆಟ್ ಇದೆ. ಅದಕ್ಕೆ ಅನುಗುಣವಾಗಿ ಗ್ಯಾರಂಟಿ ಕೊಡಿ ಎಂದು ಅಲ್ಲಿನ ನಾಯಕರಿಗೆ ಹೇಳಿದ್ದೇವೆ’ ಎಂದರು.

‘ಬಜೆಟ್ ಬಿಟ್ಟು ಗ್ಯಾರಂಟಿ ಕೊಟ್ಟರೆ ಇಲ್ಲಿ ದಿವಾಳಿ ಆಗಿ ಹೋಗುತ್ತದೆ. ರಸ್ತೆ ಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲು ಹಣ ಇರುವುದಿಲ್ಲ. ಆಗ ಎಲ್ಲರೂ ನಿಮ್ಮ ಮೇಲೆ ಮುಗಿಬೀಳುತ್ತಾರೆ. ಈ ಸರ್ಕಾರ ವಿಫಲವಾದರೆ, ಕೆಟ್ಟ ಹೆಸರು ಇಟ್ಟು ಹೋಗ್ತೀರಾ ಹೊರತು ಒಳ್ಳೆಯ ಹೆಸರು ಇಟ್ಟು ಹೋಗಲ್ಲ. ಮತ್ತೆ 10 ವರ್ಷ ವನವಾಸದಲ್ಲಿ ಇರಬೇಕಾಗುತ್ತದೆ’ ಎಂದು ಪರೋಕ್ಷವಾಗಿ ಖರ್ಗೆ ಎಚ್ಚರಿಕೆ ನೀಡಿದರು.

ಇವಿಎಂ ಬಗ್ಗೆ ಖರ್ಗೆ ಅನುಮಾನ:

ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬಗ್ಗೆ ಅನುಮಾನ ವ್ಯಕ್ತಪಡಿಸಿದ ಖರ್ಗೆ, ‘ನಾವು ಹರಿಯಾಣ ಸೋತಿದ್ದು ಹೇಗೆ? ರಾತ್ರೋರಾತ್ರಿ ಇವರು (ಬಿಜೆಪಿಯವರು) ಬದಲಾವಣೆ ಮಾಡಿಕೊಂಡರು. ಮುನ್ನಡೆಯಲ್ಲಿದ್ದ ಕ್ಷೇತ್ರಗಳು 66ರಿಂದ 37ಕ್ಕೆ ಬರುತ್ತದೆ ಅಂದರೆ ಹೇಗೆ? ಅವರು (ಬಿಜೆಪಿ) ನಿಜವಾಗಿ ಚುನಾವಣೆ ಗೆದ್ದಿಲ್ಲ. ಮೋಸದಿಂದ ಅವರು ಗೆದ್ದಿದ್ದು. ಇವಿಎಂಗಳು ಹಲವು ದೇಶಗಳಲ್ಲಿ ಇಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಎಲ್ಲಿಯೂ ಇಲ್ಲ. ಹಲವು ಕಡೆ ಮತಪತ್ರ ಇದೆ’ ಎಂದರು.

‘ನಮ್ಮ‌ ದುರ್ದೈವ ಲೋಕಸಭೆ ಚುನಾವಣೆಯಲ್ಲಿ ಇನ್ನೊಂದು 25-30 ಸೀಟು ಬರಲಿಲ್ಲ. ಅವರಿಗೆ (ಎನ್‌ಡಿಎ) ಸಂವಿಧಾನ ಬದಲಾವಣೆ ಮಾಡಲು ಆಗಲ್ಲ. ಒಂದು ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಅದರಲ್ಲಿ ನೀವೆಲ್ಲ ಯಶಸ್ವಿಯಾಗಿದ್ದೀರಿ. ಆರಸ್ಸೆಸ್‌, ಬಿಜೆಪಿ ಒಡೆದು ಆಳಲು ನೋಡುತ್ತಿವೆ. ಇದರ ಬಗ್ಗೆ  ಹುಷಾರಾಗಿರಬೇಕು’ ಕಾಂಗ್ರೆಸ್‌ ಕಾರ್ಯಕರ್ತರಿಗೆ ಖರ್ಗೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.