ADVERTISEMENT

ದೂರಶಿಕ್ಷಣ ಕೇಂದ್ರಗಳಾದ ಬಿ.ಇಡಿ ಕಾಲೇಜುಗಳು!

‘ಕೋರ್ಸ್ ಸರ್ಟಿಫಿಕೇಟ್‌’ಗಾಗಿ ಬಿ.ಇಡಿ ಕಾಲೇಜುಗಳನ್ನು ಆಯ್ದುಕೊಳ್ಳುವ ಉಪನ್ಯಾಸಕರು

ಚಂದ್ರಹಾಸ ಹಿರೇಮಳಲಿ
Published 15 ಜೂನ್ 2019, 20:00 IST
Last Updated 15 ಜೂನ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ರಾಜ್ಯದ ಹಲವು ಶಿಕ್ಷಣ ಮಹಾವಿದ್ಯಾಲಯಗಳು (ಬಿ.ಇಡಿ ಕಾಲೇಜುಗಳು) ಒಂದು ದಿನವೂ ತರಗತಿ ನಡೆಸದೇ, ಮಕ್ಕಳಿಗೆ ಪಾಠ ಮಾಡದೇ ದೂರ ಶಿಕ್ಷಣ ಸಂಸ್ಥೆಗಳ ರೀತಿ ಕಾರ್ಯ ನಿರ್ವಹಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಜ್ಯದಲ್ಲಿ ಪ್ರಸ್ತುತ 394 ಬಿ.ಇಡಿ ಕಾಲೇಜುಗಳಿವೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 473 ಹೊಸ ಕಾಲೇಜುಗಳಿಗೆ ಅನುಮತಿ ನೀಡ ಲಾಗಿತ್ತು. ಆಗ ಕಾಲೇಜುಗಳ ಸಂಖ್ಯೆ 500 ದಾಟಿತ್ತು. ಸರ್ಕಾರಿ ಪ್ರೌಢಶಾಲೆ ಗಳ ನೇಮಕಾತಿ ಪ್ರಕ್ರಿಯೆಗಳು ಕಡಿಮೆ ಯಾದಂತೆ ಬಿ.ಇಡಿ ಪ್ರವೇಶಕ್ಕೆ ವಿದ್ಯಾರ್ಥಿ ಗಳು ನಿರಾಸಕ್ತಿ ತೋರಲಾರಂಭಿಸಿದರು. ಇದರ ಪರಿಣಾಮವಾಗಿ ಹಲವು ಕಾಲೇಜುಗಳು ಬಾಗಿಲು ಮುಚ್ಚಿದವು.

ಕೆಲವು ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಭವಿಷ್ಯದ ಶಿಕ್ಷಕರನ್ನು ರೂಪಿಸಲು ಅಗತ್ಯವಾದ ಬೋಧನೆ, ತರಬೇತಿ ನೀಡದೇ ನೇರವಾಗಿ ಪರೀಕ್ಷೆಗೆ ಅವಕಾಶ ಕಲ್ಪಿಸುವ ಮೂಲಕ ಅಕ್ಷರಶಃ ‘ದೂರ’ ಶಿಕ್ಷಣ ಕಾಲೇಜುಗಳ ರೀತಿ ಕಾರ್ಯ ನಿರ್ವಹಿಸುತ್ತಿವೆ. ಒಂದು ವರ್ಷದ ಬಿ.ಇಡಿ ಕೋರ್ಸ್‌ ಎರಡು ವರ್ಷಗಳಿಗೆ ವಿಸ್ತರಿಸಿದ್ದು, ಪಿಯು ಉಪನ್ಯಾಸಕ ರಿಗೂ ಬಿ.ಇಡಿ ಕಡ್ಡಾಯಗೊಳಿಸಿದ ನಂತರ ಹಲವರು ‘ಕೋರ್ಸ್ ಸರ್ಟಿಫಿಕೇಟ್‌’ ಗಾಗಿ ಇಂತಹ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ತರಬೇತಿಯೇ ಇಲ್ಲದ ಶಿಕ್ಷಕರು: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಸೂಚನೆಯಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲೂ ಬಿ.ಇಡಿ ಕೋರ್ಸ್‌ ಅನ್ನು ಎರಡು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಹೀಗೆ ವಿಸ್ತರಿಸಿದ ಉದ್ದೇಶವೇ ಪ್ರಶಿಕ್ಷಣಾರ್ಥಿಗಳಿಗೆ ಪರಿಪೂರ್ಣ ತರಬೇತಿ ದೊರಕಬೇಕು. ಶಾಲಾ ಮಕ್ಕಳಿಗೆ ಗುಣಮಟ್ಟದ ಬೋಧನೆ ಇರಬೇಕು ಎಂಬ ಕಾರಣಕ್ಕಾಗಿ. ಪ್ರಶಿಕ್ಷಣಾರ್ಥಿಗಳಿಗೆ ಪಠ್ಯಗಳ ಬೋಧನೆ ಜತೆಗೆ, ಅಣು ಬೋಧನೆ, ಸಮಗ್ರ ಬೋಧನೆ, ಬೋಧನಾ ಕೌಶಲ, ವಿಚಾರ ಸಂಕಿರಣಗಳು, ನಿಯೋಜಿತ ಬರಹಗಳು, 12ರಿಂದ 16 ವಾರ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡಿಸುವ ಮೂಲಕ ಅವರನ್ನು ಉತ್ತಮ ಶಿಕ್ಷಕರನ್ನಾಗಿ ರೂಪಿಸಲಾಗುತ್ತದೆ. ಇಂತಹ ಯಾವ ತರಬೇತಿಯನ್ನೂ ನೀಡದೇ ನೇರವಾಗಿ ಪರೀಕ್ಷೆ ಬರೆಸಲಾಗುತ್ತಿದೆ.

ವಿಶ್ವವಿದ್ಯಾಲಯದ ಸಮನ್ವಯ ಸಮಿತಿ ಭೇಟಿ ವೇಳೆ ಕೆಲವು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಹಾಜರಿರಲಿಲ್ಲ. ಪ್ರವೇಶ ಪ್ರಕ್ರಿಯೆ ಮುಗಿದ ನಂತರವೂ ವಿದ್ಯಾರ್ಥಿಗಳ ಪಟ್ಟಿಯನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿಲ್ಲ. ಇಂತಹ ಕಾಲೇಜುಗಳಿಗೆ ವಿಶ್ವವಿದ್ಯಾಲಯಗಳು ಸಂಯೋಜನೆ ನಿರಾಕರಿಸಿವೆ.

‘ವಿಶ್ವವಿದ್ಯಾಲಯದ ನಿಯಮಗಳನ್ನು ಪಾಲನೆ ಮಾಡದ ಕಾರಣ ಹರಿಹರ ತಾಲ್ಲೂಕು ಮಲೇಬೆನ್ನೂರಿನ ಮಾಲತೇಶ ಶಿಕ್ಷಣ ಮಹಾವಿದ್ಯಾಲಯ, ಹೊನ್ನಾಳಿ ತಾಲ್ಲೂಕು ಭಾನುಪ್ರಕಾಶ ಕಾಲೇಜುಗಳಿಗೆ ನೀಡಿರುವ ಸಂಯೋಜನೆ ತಡೆಹಿಡಿಯಲಾಗಿದೆ. ಕೋರ್ಟ್‌ ಆದೇಶ ಬಂದ ನಂತರ ಮೊದಲ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆಯ ಉಳಿದ ವಿಷಯಗಳನ್ನು ಬರೆಯಲು ಅನುಮತಿ ನೀಡಲಾಗಿದೆ. ‘ದೂರ’ ಶಿಕ್ಷಣದ ರೀತಿ ಕೆಲಸ ಮಾಡುವ ಯಾವಸಂಸ್ಥೆಗೂ ಮಾನ್ಯತೆ ನೀಡುವುದಿಲ್ಲ’ ಎಂದು ಮಾಹಿತಿ ನೀಡುತ್ತಾರೆ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಬಸವರಾಜ ಬಣಕಾರ್.

ವಾಮಮಾರ್ಗದ ಮೂಲಕ ಕೆಲವು ಶಿಕ್ಷಣ ಸಂಸ್ಥೆಗಳು ಬಿ.ಇಡಿ ಕೋರ್ಸ್‌ ನೀಡುತ್ತಿರುವ ಪರಿಣಾಮ ನಿತ್ಯವೂ ಬೋಧನಾ ಕಾರ್ಯ ಕೈಗೊಂಡಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರ ಇಂತಹ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಪ್ರಾಂಶುಪಾಲ ಗಂಗಾಧರ್, ಉಪನ್ಯಾಸಕ ಧನಂಜಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.