ADVERTISEMENT

ಅಬಕಾರಿ ವರಮಾನಕ್ಕೆ ಬಿಯರ್‌ ‘ಕಿಕ್‌’

ರಾಜ್ಯದಾದ್ಯಂತ 2.67 ಕೋಟಿ ಪೆಟ್ಟಿಗೆಗಳಷ್ಟು ಬಿಕರಿ, ಆದಾಯ ಹೆಚ್ಚಳ

ಜಯಸಿಂಹ ಆರ್.
Published 26 ಅಕ್ಟೋಬರ್ 2024, 0:21 IST
Last Updated 26 ಅಕ್ಟೋಬರ್ 2024, 0:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್‌ 23ರವರೆಗೆ ರಾಜ್ಯದಲ್ಲಿ ಬಿಯರ್‌ ಮಾರಾಟವು ಶೇ 13.17ರಷ್ಟು ಹೆಚ್ಚಳವಾಗಿದೆ.

ಭಾರತೀಯ ಮದ್ಯ (ಐಎಂಎಲ್‌) ಮಾರಾಟದಲ್ಲಿ ತುಸು ಇಳಿಕೆಯಾಗಿದ್ದರೂ ಬಿಯರ್ ಮಾರಾಟದಲ್ಲಿನ ಏರಿಕೆಯಿಂದ ಒಟ್ಟಾರೆ ಮದ್ಯ ಮಾರಾಟ ಪ್ರಗತಿ ಕಂಡಿದೆ. ಮದ್ಯ ಮಾರಾಟ ಮತ್ತು ಇತರ ಮೂಲಗಳಿಂದ ಅಬಕಾರಿ ಇಲಾಖೆ ಸಂಗ್ರಹಿಸಿದ ಆದಾಯವೂ ಶೇ 6.92ರಷ್ಟು ಏರಿಕೆಯಾಗಿದೆ.

ADVERTISEMENT

2023–24ರ ಏಪ್ರಿಲ್‌ 1ರಿಂದ ಸೆಪ್ಟೆಂಬರ್ 23ರವರೆಗೆ ರಾಜ್ಯದಾದ್ಯಂತ 2.36 ಕೋಟಿ ಪೆಟ್ಟಿಗೆಗಳಷ್ಟು ಬಿಯರ್ ಮಾರಾಟವಾಗಿತ್ತು. 2024–25ರ ಪ್ರಸಕ್ತ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಬಿಯರ್ ಮಾರಾಟವು 31 ಲಕ್ಷ ಪೆಟ್ಟಿಗೆಗಳಷ್ಟು ಏರಿಕೆಯಾಗಿದೆ. 

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 3.93 ಕೋಟಿ ಪೆಟ್ಟಿಗೆಗಳಷ್ಟು ಐಎಂಎಲ್‌ ಮಾರಾಟವಾಗಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ಐಎಂಎಲ್‌ ಮಾರಾಟದಲ್ಲಿ 5 ಲಕ್ಷ ಪೆಟ್ಟಿಗೆಗಳಷ್ಟು ಇಳಿಕೆಯಾಗಿದೆ. ಹೀಗಿದ್ದೂ ಒಟ್ಟು ಮದ್ಯ ಮಾರಾಟದಲ್ಲಿ 26 ಲಕ್ಷ ಪೆಟ್ಟಿಗೆಗಳಷ್ಟು ಏರಿಕಯಾಗಿದೆ. 

‘ಐಎಂಎಲ್‌ ಮಾರಾಟ ಇಳಿಕೆಯ ಕಾರಣದಿಂದ ಒಟ್ಟಾರೆ ಮದ್ಯ ಮಾರಾಟವು ಇಳಿಕೆಯಾಗುವ ಸಂಭವವಿತ್ತು. ಆದರೆ ಏಪ್ರಿಲ್‌, ಮೇ ಮತ್ತು ಜೂನ್‌ ಅವಧಿಯಲ್ಲಿ ಬಿಯರ್ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಕಾರಣ, ಕುಸಿತದ ಅಪಾಯ ತಪ್ಪಿತು. ಜತೆಗೆ ಒಟ್ಟಾರೆ ಮದ್ಯ ಮಾರಾಟ ಪ್ರಮಾಣವೂ ಏರಿಕೆಯಾಯಿತು’ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.

‘ವಿದೇಶಿ ಮತ್ತು ಪ್ರೀಮಿಯಂ ಮದ್ಯದ ಬೆಲೆ ಏರಿಕೆ ಕಾರಣದಿಂದ ಅವುಗಳ ಮಾರಾಟ ಕಡಿಮೆಯಾಗಿತ್ತು. ಈ ಬಾರಿಯ ಬೇಸಿಗೆಯಲ್ಲಿ ವಿಪರೀತ ಬಿಸಿಲಿನ ಕಾರಣದಿಂದ ಹಲವು ಮಂದಿ ಬಿಯರ್‌ ಮೊರೆ ಹೋಗಿದ್ದರು. ಹೀಗಾಗಿಯೇ ಬಿಯರ್ ಮಾರಾಟ ಹೆಚ್ಚಳವಾಯಿತು. ಈ ಆರ್ಥಿಕ ವರ್ಷದಲ್ಲಿ ಈವರೆಗೂ ಬಿಯರ್ ಮಾರಾಟ ಅದೇ ಮಟ್ಟವನ್ನು ಕಾಯ್ದುಕೊಂಡಿದೆ’ ಎಂದು ಮೂಲಗಳು ಹೇಳಿವೆ.

ಅಧಿಸೂಚನೆ ವಿಳಂಬದ ಪರಿಣಾಮ’

‘ಮದ್ಯ ಉತ್ಪಾದಕರು ಇತರೆ ರಾಜ್ಯಗಳಿಗೆ ನೀಡುತ್ತಿರುವ ಕನಿಷ್ಠ ಘೋಷಿತ ದರದಲ್ಲೇ ಕರ್ನಾಟಕಕ್ಕೂ ಮದ್ಯ ಪೂರೈಸುವುದನ್ನು ಕಡ್ಡಾಯಗೊಳಿಸುವ ಸಂಬಂಧ ಅಧಿಸೂಚನೆ ಹೊರಡಿಸುವುದು ವಿಳಂಬವಾದ ಕಾರಣದಿಂದ ಐಎಂಎಲ್ ಮಾರಾಟ ಇಳಿಕೆಯಾಗಿದೆ’ ಎಂದು ಹೆಸರು ಬಹಿರಂಗಪ‍ಡಿಸಲು ಬಯಸದ ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಮದ್ಯ ತಯಾರಿಕಾ ಕಂಪನಿಗಳು ಕರ್ನಾಟಕದಲ್ಲಿ, ನೆರೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕನಿಷ್ಠ ಘೋಷಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಪೂರೈಕೆ ಮಾಡುತ್ತಿದ್ದವು. ಇದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು–1968ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಜೂನ್‌ನಲ್ಲಿ ಸಿದ್ಧತೆ ನಡೆಸಿತ್ತು.

‘ಜುಲೈ 1ರಿಂದಲೇ ಹೊಸ ನಿಯಮಗಳು ಜಾರಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅದು ಎರಡು ತಿಂಗಳು ವಿಳಂಬವಾಯಿತು. ನಿಯಮ ಬದಲಾವಣೆ ಸಂಬಂಧದ ವಿಚಾರ ಮದ್ಯ ಉತ್ಪಾದಕರಿಗೆ ತಿಳಿದಿದ್ದ ಕಾರಣ, ಐಎಂಎಲ್‌ ಉತ್ಪಾದನೆಯನ್ನು ಕಡಿಮೆ ಮಾಡಿದ್ದರು. ಲಭ್ಯತೆ ಕೊರತೆಯ ಕಾರಣ ರಾಜ್ಯದ ಹಲವೆಡೆ ಮಾರಾಟವೂ ಇಳಿಕೆಯಾಗಿತ್ತು’ ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.