ಬೆಂಗಳೂರು: ದೂರದ ಊರುಗಳಿಂದ ನಗರಕ್ಕೆ ಬರುವ ರೈಲುಗಳಲ್ಲಿ ಮಕ್ಕಳನ್ನು ತೋರಿಸಿ ಭಿಕ್ಷೆ ಬೇಡುವ ಹೆಂಗಸರು ಪ್ರತಿದಿನ ಎಂಬಂತೆ ಕಂಡು ಬರುತ್ತಾರೆ. ಈ ಮಹಿಳೆಯರ ಕಂಕುಳಿಗೆ ಕಟ್ಟಿಕೊಂಡ ಬಟ್ಟೆಗೆ ಜೋತುಬಿದ್ದ ಮಕ್ಕಳು ಕಣ್ಣು ಬಿಡುವುದು ಅಪರೂಪ. ಇಂಥ ಮಕ್ಕಳನ್ನು ರಕ್ಷಿಸಿ ಎಂದು ಪ್ರಯಾಣಿಕರು ಕರೆ ಮಾಡುವ ರೈಲ್ವೆ ಇಲಾಖೆಯ 182 ಸಹಾಯವಾಣಿ ಸತ್ತು ಹೋಗಿದೆ.
‘ನಾನು ಆರು ತಿಂಗಳಿನಿಂದ ನೋಡ್ತಾ ಇದ್ದೀನಿ. ಈ ಮಕ್ಕಳಿಗೆ ಏನೋ ಮದ್ದು ಹಾಕ್ತಾರಂತೆ ಸಾರ್. ಅವು ಕಣ್ಣೇ ಬಿಡಲ್ಲ. ಸತ್ತು ಹೋದಂತೆ ಮಲಗಿರ್ತಾವೆ’ ಎಂದು ಪ್ರಯಾಣಿಕರು ಹೇಳುತ್ತಾರೆ.
ಬಾಗಲಕೋಟೆಯಿಂದ ಮೈಸೂರಿಗೆ ಬರುವ ‘ಬಸವ ಎಕ್ಸ್‌ಪ್ರೆಸ್’ ರಾಜಾನುಕುಂಟೆ ನಿಲ್ದಾಣ ಸಮೀಪಿಸಿದಾಗ (ಬೆಳಿಗ್ಗೆ 9.26) ಚಿತ್ರದಲ್ಲಿರುವ ಈ ಮಹಿಳೆ ಕಾಣಸಿಕ್ಕರು. ವಿಚಾರಿಸಿದಾಗ ‘ನಮ್ಮದು ತಿರುಪತಿ’ ಎಂದು ಒಮ್ಮೆ ‘ನಮ್ಮದು ಹಿಂದೂಪುರ’ ಎಂದು ಮತ್ತೊಮ್ಮೆ, ‘ನಮ್ಮದು ದೊಡ್ಡಬಳ್ಳಾಪುರ’ ಎಂದು ಮಗದೊಮ್ಮೆ ಉತ್ತರ ಕೊಟ್ಟರು. ಹೆಸರು ಹೇಳಲು ಒಪ್ಪಲಿಲ್ಲ. ಆದರೆ ‘ಬೇಕಿದ್ರೆ ಫೋಟೊ ತಗೊ. ಏನು ಬೇಕಾದ್ರೂ ಮಾಡಿಕೊ’ ಎಂದು ಧೈರ್ಯವಾಗಿ ಅನುಮತಿ ಕೊಟ್ಟರು.
‘ಭಿಕ್ಷೆ ಬೇಡುವುದು ತಪ್ಪು, ಮಕ್ಕಳನ್ನು ಯಾಕೆ ಹೀಗೆ ಗೋಳುಹೋಯ್ಕೊಳ್ತೀರಿ’ ಎಂದು ಕೆಲ ಪ್ರಯಾಣಿಕರು ಪ್ರಶ್ನಿಸಿದ್ದಕ್ಕೆ, ‘ಹೊಟ್ಟೆಬಟ್ಟೆಗೆ ಇನ್ನೇನು ಮಾಡಬೇಕು. ಇದ್ರೆ ದುಡ್ಡುಕೊಡಿ, ಇಲ್ಲದಿದ್ರೆ ಸುಮ್ನಿರಿ. ರೈಲ್ವೆ ಪೊಲೀಸ್, ಟಿಟಿ ಎಲ್ಲರಿಗೂ ನನ್ನ ವಿಷಯ ಗೊತ್ತು’ ಎಂದು ಎಲ್ಲರ ಮೇಲೆ ಜಗಳದ ಧಾಟಿಯಲ್ಲಿ ಹರಿಹಾಯ್ದರು.
‘ನೀವು ಕರೆತರುವ ಮಗು ಪ್ರತಿದಿನ ಹೀಗೆ ಮಲಗಿಯೇ ಇರುತ್ತೆ. ಒಮ್ಮೆ ಎಬ್ಬಿಸಿ ನೋಡೋಣ’ ಎಂದು ಪ್ರಯಾಣಿಕರೊಬ್ಬರು ಏರುದನಿಯಲ್ಲಿ ಪ್ರಶ್ನಿಸಿದಾಗ ಆ ಮಹಿಳೆ ಸುಮಾರು ವರ್ಷ ವಯಸ್ಸಿನ ಮಗುವನ್ನು ಎಬ್ಬಿಸಲು ಪ್ರಯತ್ನಿಸಿದರು. ಅದು ತೇಲುಗಣ್ಣು–ಮೇಲುಗಣ್ಣು ಮಾಡಿ ಮತ್ತೆ ಎಚ್ಚರತಪ್ಪಿತು. ಇಷ್ಟಾದ ತಕ್ಷಣ ಆ ಮಹಿಳೆ ಬೇರೆ ಕೋಚ್‌ನತ್ತ ಓಡಿಹೋದರು.
ರೈಲು ಯಲಹಂಕ ನಿಲ್ದಾಣ ತಲುಪಿದಾಗ ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆಯ ಮಹಿಳೆ ಮತ್ತು ಮಕ್ಕಳ ಸಹಾಯವಾಣಿ 182 ಸಂಖ್ಯೆಗೆ ಕರೆ ಮಾಡಿದರು (ಬೆಳಿಗ್ಗೆ 9.40) ಆದರೆ, ‘ನೀವು ಕರೆ ಮಾಡಿದ ಸಂಖ್ಯೆಯು ತಪ್ಪಾಗಿದೆ’ ಎಂದು ಒಮ್ಮೆ ‘ನೀವು ಮಾತನಾಡಲು ಪ್ರಯತ್ನಿಸುತ್ತಿರುವ ಕಸ್ಟಮರ್ ಈಗ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದು ಮಗದೊಮ್ಮೆ ಉತ್ತರ ಬಂತು.
ನಂತರ ಗೂಗಲ್‌ನಲ್ಲಿ ಹುಡುಕಿ ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್‌ನ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದರು. ಆ ಕಡೆಯಿಂದ ಮಾತನಾಡಿದ ವ್ಯಕ್ತಿಯು ಪ್ರಯಾಣಿಕರ ಅಹವಾಲನ್ನು ಸಹಾನುಭೂತಿಯಿಂದ ಆಲಿಸಿ ‘ನಿಮ್ಮ ರೈಲು ಯಶವಂತಪುರಕ್ಕೆ ಬರುವ ಹೊತ್ತಿಗೆ ನಮ್ಮವರು ಪೊಲೀಸರೊಂದಿಗೆ ನಿಂತಿರುತ್ತಾರೆ. ಮಗುವನ್ನು ರಕ್ಷಿಸುತ್ತಾರೆ’ ಎಂದು ಭರವಸೆಯನ್ನೇನೋ ಕೊಟ್ಟರು. ರೈಲು ಯಶವಂತಪುರ ನಿಲ್ದಾಣಕ್ಕೆ ಬೆಳಿಗ್ಗೆ 10.25ಕ್ಕೆ ಯಶವಂತಪುರಕ್ಕೆ ಬಂತು. ಆದರೆ ಅಲ್ಲಿ ಯಾರೂ ಕಾಣಿಸಲಿಲ್ಲ.
‘ಇದು ನಿತ್ಯದ ದೃಶ್ಯ. ಮುಂಜಾನೆ ಈ ಮಾರ್ಗದಲ್ಲಿ ಸಂಚರಿಸುವ ಉದ್ಯಾನ್ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್, ಪ್ರಶಾಂತಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸುಮಾರು ಹತ್ತು ಮಹಿಳೆಯರು ಮಕ್ಕಳನ್ನು ತೋರಿಸಿ ಭಿಕ್ಷೆ ಬೇಡುವುದನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ರೈಲಿನಲ್ಲಿ ಇರುವ ಪೊಲೀಸರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿದಿನ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಸಂಚರಿಸುವ ರಕ್ಷಿತಾ ಹೇಳಿದರು.
ಕೆಲ ಪ್ರಯಾಣಿಕರು ರೈಲ್ವೆ ನಿಯಂತ್ರಣಾ ಕೇಂದ್ರದ ದೂರು ಸ್ವೀಕಾರ ಕೇಂದ್ರದ ಸಹಾಯವಾಣಿ 138 ಸಂಖ್ಯೆಗೆ ಕರೆ ಮಾಡಿದಾಗ, ‘ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಈ ವಿಷಯವನ್ನು ರೈಲ್ವೆ ರಕ್ಷಣಾ ದಳದ ನಿಯಂತ್ರಣ ಕೇಂದ್ರಕ್ಕೆ ತಿಳಿಸ್ತೀವಿ. ಶೀಘ್ರ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ’ ಎಂಬ ಉತ್ತರ ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.