ಬೆಳಗಾವಿ: ಕೃಷಿಭೂಮಿಯಲ್ಲಿ ಸ್ವಂತಕ್ಕೆ ಮನೆ, ಕೃಷಿ ಪರಿಕರಗಳನ್ನು ಸಂಗ್ರಹಿಸಿಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ರೈತರು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೇ ಮಂಜೂರಾತಿ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗೆ ಗಡುವು ವಿಧಿಸುವ ಉದ್ದೇಶದಿಂದ ‘ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ’ ಮಸೂದೆ ಮಂಡಿಸಲಾಗಿದೆ.
ಈ ಮಸೂದೆಯನ್ನು ಕಂದಾಯ ಸಚಿವ ಆರ್. ಅಶೋಕ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದರು.ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95 ಮತ್ತು 96ನ್ನು ಮತ್ತಷ್ಟು ತಿದ್ದುಪಡಿ ತರುವ ಉದ್ದೇಶವನ್ನು ಮಸೂದೆ ಹೊಂದಿದೆ.
‘ಮಹಾ ಯೋಜನೆ (ಮಾಸ್ಟರ್ ಪ್ಲಾನ್) ಅಥವಾ ನಗರ ಯೋಜನಾ ಪ್ರಾಧಿಕಾರದ ಮಂಜೂರಾತಿ ಅನ್ವಯ ಕೃಷಿಭೂಮಿ ಅಥವಾ ಅದರ ಭಾಗವನ್ನು ಯಾವುದಾದರೂ ಇತರ ಉದ್ದೇಶಕ್ಕೆ ಬಳಸಲು ಇಚ್ಚಿಸುವವರು ನಿಗದಿಪಡಿಸಿದ ದಂಡ ಪಾವತಿಸಿ ಪ್ರಮಾಣಪತ್ರ ಸಹಿತ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಹೀಗೆ ಸಲ್ಲಿಕೆಯಾದ ಅರ್ಜಿಗಳಿಗೆ ಏಳು ದಿನಗಳಲ್ಲಿ ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಬೇಕು. 15 ದಿನ ಕಳೆದರೂ ಜಿಲ್ಲಾಧಿಕಾರಿ ಅರ್ಜಿಗಳ ವಿಲೇವಾರಿ ಮಾಡದಿದ್ದರೆ, ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿದೆ ಎಂದು ಪರಿಭಾವಿಸಿಕೊಳ್ಳಬಹುದು’ ಎಂದು ಪ್ರಸ್ತಾವಿತ ಮಸೂದೆಯಲ್ಲಿ ತಿಳಿಸಲಾಗಿದೆ.
ಮೀಸಲು ಹೆಚ್ಚಳಕ್ಕೆ ಮಸೂದೆ: ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾಯ್ದೆ ರೂಪಿಸಲು ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಯಿತು.
ಕೈಗಾರಿಕೆಗಳ ಉತ್ತೇಜನಕ್ಕೆ ‘ವಿಶೇಷ ಹೂಡಿಕೆ ಪ್ರದೇಶ’ ಮಸೂದೆ– 2022‘ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ರಾಜ್ಯದ ಗಡಿಭಾಗದಲ್ಲಿ 57 ತಾಲ್ಲೂಕುಗಳಿದ್ದವು. ಸರ್ಕಾರ ಹೊಸದಾಗಿ 47 ತಾಲ್ಲೂಕುಗಳನ್ನು ರಚಿಸಿದೆ. ಅದರಲ್ಲಿ 11 ತಾಲ್ಲೂಕುಗಳು ಗಡಿ ಭಾಗಕ್ಕೆ ಬರುತ್ತದೆ. ಈ ತಾಲ್ಲೂಕುಗಳನ್ನು ಗಡಿಭಾಗ ಎಂದು ಪರಿಗಣಿಸಲು ಅನುವು ಮಾಡಿಕೊಡುವ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ವಿಧಾನಸಭೆಯಲ್ಲಿ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.