ಬೆಳಗಾವಿ: ಜಿಲ್ಲೆಯ 323 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಇದ್ದು, ವಿದ್ಯುತ್ ಪೂರೈಕೆ ವ್ಯವಸ್ಥೆ ಹಾಳಾಗಿದೆ. ಹೀಗಾಗಿ, ಅಲ್ಲಿನವರಿಗೆ ಯಾರೊಂದಿಗೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ದೂರದೂರುಗಳ ಬಂಧು–ಮಿತ್ರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ನಡುಗಡ್ಡೆಗಳಲ್ಲಿ ಅಥವಾ ಗಂಜಿ (ಪರಿಹಾರ) ಕೇಂದ್ರಗಳಲ್ಲಿರುವವರು ತಮ್ಮವರನ್ನು ಸಂಪರ್ಕಿಸಲಾಗುತ್ತಿಲ್ಲ. ಮೊಬೈಲ್ ಫೋನ್‌ಗಳಿದ್ದರೂ ಚಾರ್ಜ್ ಮಾಡಿಕೊಳ್ಳಲಾಗುತ್ತಿಲ್ಲ. ಹೊರ ಜಗತ್ತಿನೊಂದಿಗೆ ಸಂಪರ್ಕವಿಲ್ಲದಂತಾಗಿದೆ.
ಜಲಾವೃತವಾದ ಊರುಗಳಲ್ಲಿದ್ದ ಎಲ್ಲರನ್ನೂ ಸುರಕ್ಷಿತ ಸ್ಥಳ ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ, ಕೆಲವರು ಇನ್ನೂ ನಡುಗಡ್ಡೆಗಳಲ್ಲಿಯೇ ಇದ್ದಾರೆ ಎಂಬ ಮಾತುಗಳು ಸಂತ್ರಸ್ತರ ಶಿಬಿರಗಳಲ್ಲಿ ಕೇಳಿಬರುತ್ತಿವೆ. ಅಲ್ಲಿದ್ದವರು ಪ್ರವಾಹ ಹೆಚ್ಚುವ ಮುನ್ನ ಊರು ಬಿಟ್ಟರೇ, ಬೇರೆಡೆ ಆಶ್ರಯ ಪಡೆದರೇ? ಸಂಬಂಧಿಕರ ಮನೆಗೆ ಹೋಗಿದ್ದಾರೆಯೇ ಅಥವಾ ನಾಪತ್ತೆಯಾಗಿದ್ದಾರೆಯೇ ಎನ್ನುವುದು ಖಚಿತವಾಗುತ್ತಿಲ್ಲ.
ಸಹಾಯವಾಣಿ ಮೊರೆ: ಇಲ್ಲಿನವರ ದೂರದೂರುಗಳ ನೆಂಟರಿಷ್ಟರು ತಮ್ಮವರ ಇರುವಿಕೆ ಖಚಿತಪಡಿಸಿಕೊಳ್ಳಲು ಪತ್ರಿಕಾ ಕಚೇರಿಗಳು, ಜಿಲ್ಲಾಡಳಿತ ನೀಡಿರುವ ಸಹಾಯವಾಣಿಗಳಿಗೆ ಕರೆ ಮಾಡುತ್ತಿದ್ದಾರೆ. ಸ್ಥಳಾಂತರಿಸಲಾದ ಎಲ್ಲರೂ ಪರಿಹಾರ ಕೇಂದ್ರಗಳಲ್ಲಿ ಇಲ್ಲ. ಹೀಗಾಗಿ, ಮಾಹಿತಿಗಾಗಿ ಸಹಾಯವಾಣಿ ಕೇಂದ್ರದವರೂ ಪರದಾಡುತ್ತಿದ್ದಾರೆ.
‘ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಸಂತ್ರಸ್ಥರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಪತ್ನಿ, ಮಕ್ಕಳನ್ನು ಮೊದಲು ಕಳುಹಿಸಿ ಪತಿ ತೋಟದ ಮನೆಯಲ್ಲೇ ಉಳಿದಿರಬಹುದು. ನಾಪತ್ತೆ ಆಗಿದ್ದಲ್ಲಿ ಸಂಬಂಧಿಸಿದವರು ಆಯಾ ಠಾಣೆಗೆ ದೂರು ನೀಡಬೇಕು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.