ADVERTISEMENT

ಅಂದು ಬಂಡಾಯ, ಈಗ ‘ಸಾಧು’ ಅಭ್ಯರ್ಥಿ

ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದ ಸತೀಶ ಜಾರಕಿಹೊಳಿಯೇ ಟಿಕೆಟ್‌ ಕೊಡಿಸಿದ್ದು!

ಎಂ.ಮಹೇಶ
Published 30 ಏಪ್ರಿಲ್ 2019, 14:16 IST
Last Updated 30 ಏಪ್ರಿಲ್ 2019, 14:16 IST
ಸಾಧುನವರ
ಸಾಧುನವರ   

ಬೆಳಗಾವಿ: ಇಲ್ಲಿ 2015ರಲ್ಲಿ ನಡೆದಿದ್ದ ವಿಧಾನಪರಿಷತ್‌ ಚುನಾವಣೆಯಲ್ಲಿ (ಸ್ಥಳೀಯ ಸಂಸ್ಥೆಗಳಿಂದ) ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ವಿರೂಪಾಕ್ಷಿ ಎಸ್. ಸಾಧುನವರ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ದೊರೆತಿದೆ.

ವಿಶೇಷವೆಂದರೆ, ಆಗ ಪಕ್ಷ ವಿರೋಧಿ ಚಟುವಟಿಕೆಗಳನ್ನು ಕೈಗೊಂಡಿದ್ದರಿಂದ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ (ಆಗಲೂ ಉಸ್ತುವಾರಿಯಾಗಿದ್ದರು) ಸತೀಶ ಜಾರಕಿಹೊಳಿ ಅವರೇ ಈಗ ಟಿಕೆಟ್‌ಗೆ ಶಿಫಾರಸು ಮಾಡಿದ್ದು!

ಆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವೀರಕುಮಾರ ಪಾಟೀಲ ಸೋಲು ಅನುಭವಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ವಿವೇಕರಾವ ಪಾಟೀಲ ಗೆದ್ದಿದ್ದರು. ಇವರು ರಮೇಶ ಜಾರಕಿಹೊಳಿ ಬೆಂಬಲಿಗ. ಆದರೆ, ಟಿಕೆಟ್‌ ಫೈಟ್‌ನಲ್ಲಿ ಗೆದ್ದಿರುವ ಕೆಎಲ್‌ಇ ಸಂಸ್ಥೆ ನಿರ್ದೇಶಕರೂ ಆಗಿರುವ ಸಾಧುನವರ ಪರವಾಗಿ ಮತ ಕೇಳಬೇಕಾದ ಅನಿವಾರ್ಯತೆ ಹಾಗೂ ಮುಜುಗರದ ಪರಿಸ್ಥಿತಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಎದುರಾಗಿದೆ.

ADVERTISEMENT

‘ವರಿಷ್ಠರು ಅವರವರ ನೇರಕ್ಕೆ ನಿರ್ಧರಿಸುತ್ತಾರೆ. ಆದರೆ, ತಳಮಟ್ಟದಲ್ಲಿ ಕೆಲಸ ಮಾಡುವ ನಮ್ಮ ಅಭಿಪ‍್ರಾಯಗಳನ್ನು ಕೇಳುವುದಿಲ್ಲ. ಹೇಳಿದವರ ಪರವಾಗಿ ಪ್ರಚಾರ ಮಾಡುವುದಷ್ಟೇ ನಮ್ಮ ಕೆಲಸವಾಗಿದೆ. ಮುಜುಗರವಾಗುತ್ತದೆ ನಿಜ. ಹಿಂದಿನದನ್ನು ಮರೆತು ಕೆಲಸ ಮಾಡಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬ್ಲಾಕ್‌ ಅಧ್ಯಕ್ಷರೊಬ್ಬರು ಪ್ರತಿಕ್ರಿಯಿಸಿದರು.

ಹಿಂದೆ ಮಾಡಿರಬಹುದು: ‘ಅವರು ಹಿಂದೆ ಬಂಡಾಯ ಮಾಡಿರಬಹುದು. ಈಗ ಪಕ್ಷದೊಂದಿಗೆ ಇರುತ್ತೇನೆ; ಕೆಲಸ ಮಾಡುತ್ತೇನೆ ಎಂದು ಬಂದಿದ್ದಾರೆ. ಹೀಗಾಗಿ ಟಿಕೆಟ್‌ಗೆ ಶಿಫಾರಸು ಮಾಡಲಾಗಿತ್ತು. ಅದನ್ನು ಹೈಕಮಾಂಡ್ ಒಪ್ಪಿದೆ. ನಮ್ಮ ಶಾಸಕರಲ್ಲಿ ಶೇ 50ರಷ್ಟು ಮಂದಿ ಬಂಡಾಯ ಎದ್ದಿದದ್ದವರೇ ಇದ್ದಾರೆ. ಎಲ್ಲರಲ್ಲೂ ಏನಾದರೊಂದು ದೋಷ ಇರುತ್ತದೆ. ಚುನಾವಣೆ ಸಂದರ್ಭದಲ್ಲಿ ಗೆಲ್ಲುವ ಸಾಮರ್ಥ್ಯವನ್ನಷ್ಟೇ ನೋಡಬೇಕಾಗುತ್ತದೆ. ಹಿಂದಿನ ಸಂದರ್ಭವೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ’ ಎಂದು ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.

‘ಸಾಧುನವರ ಬಂಡಾಯವಾಗಿ ನಿಂತಿದ್ದ ಸಂದರ್ಭದಲ್ಲಿ ಪಕ್ಷಕ್ಕೆ ತೊಂದರೆಯಾಗಿರಬಹುದು. ಆದರೆ, ಈಗ ಅವರ ಪರವಾಗಿ ಪ್ರಚಾರ ಮಾಡಲು ಮುಜುಗರವೇನಿಲ್ಲ. ಎಲ್ಲ ಪಕ್ಷದಲ್ಲೂ ಬಂಡಾಯ ಇದ್ದದ್ದೇ. ಬಿಟ್ಟು ಹೋದವರನ್ನು ಒಳಕ್ಕೆ ಕರೆದುಕೊಂಡೇ ಸಂಘಟನೆಯನ್ನು ಬಲಪಡಿಸಬೇಕಾಗುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಕೆಲಸ ಮಾಡುತ್ತೇವೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಪ್ರತಿಕ್ರಿಯಿಸಿದರು.

ಲಕ್ಷ್ಮಿಗೆ ಹಿನ್ನಡೆ: ಮಾಜಿ ಸಂಸದ ಎಸ್.ಬಿ. ಸಿದ್ನಾಳ ಅವರ ಪುತ್ರ ಶಿವಕಾಂತ ಸಿದ್ನಾಳ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಸೋದರ ಚನ್ನರಾಜ ಹಟ್ಟಿಹೊಳಿಗೆ ಟಿಕೆಟ್‌ ಕೊಡಿಸಲು ಪ್ರಬಲ ಲಾಬಿ ನಡೆಸಿದ್ದರು. ಆದರೆ, ತಮ್ಮ ಕಡೆಯವರಿಗೆ ಟಿಕೆಟ್‌ ಕೊಡಿಸುವಲ್ಲಿ ಸತೀಶ ಜಾರಕಿಹೊಳಿ ಯಶಸ್ವಿಯಾಗಿರುವುದರಿಂದ, ಲಕ್ಷ್ಮಿಗೆ ಹಿನ್ನಡೆಯಾಗಿದೆ. ಹೀಗಾಗಿ, ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ. ಜಿಲ್ಲೆಯ ಇನ್ನೊಬ್ಬ ಪ್ರಭಾವಿ ಮುಖಂಡ, ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಪಕ್ಷದ ಸಂಘಟನೆ ಅಥವಾ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಿಂದ ದೂರ ಉಳಿದಿ
ರುವುದು ಕೂಡ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಈ ಬೆಳವಣಿಗೆಗಳಿಂದಾಗಿ ಎಲ್ಲ ಜವಾಬ್ದಾರಿಯೂ ಸತೀಶ ಹೆಗಲಿಗೇ ಬಿದ್ದಂತಾಗಿದೆ!

* ಹಿಂದಿನದನ್ನು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ. ಹೀಗಾಗಿ, ಟಿಕೆಟ್‌ ಸಿಕ್ಕಿದೆ. ಸತತ ಮೂರು ಚುನಾವಣೆಗಳಲ್ಲಿ ಪಕ್ಷ ಸೋತಿದೆ. ಈಗ ಗೆಲ್ಲುವುದಷ್ಟೇ ಗುರಿ.

- ಡಾ.ವಿ.ಎಸ್. ಸಾಧುನವರ, ಕಾಂಗ್ರೆಸ್‌ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.