ನೇಗಿನಹಾಳ: ಸೋಮವಾರ ಬೆಳಿಗ್ಗೆ ನೇಣಿಗೆ ಶರಣಾದ ಇಲ್ಲಿನ ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಪಾರ್ಥಿವ ಶರೀರದ ಬಳಿ ಡೆತ್ ನೋಟ್ ಪತ್ತೆಯಾಗಿದೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಅದರಲ್ಲಿ ಬರೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ ಡೆತ್ ನೋಟ್‌ನಲ್ಲಿ ಸ್ವಾಮೀಜಿ ಸಹಿ ಇಲ್ಲ.
ಡೆತ್ ನೋಟದಲ್ಲಿ ಏನೇನಿದೆ?
'ಕ್ಷಮಿಸಿಬಿಡಿ ಭಕ್ತರೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ವಿಚಾರಣೆಗೊಳಪಡಿಸಬೇಡಿ. ಈ ಲೋಕದ ಗೊಡವೆ ಸಾಕು. ನಾ ಈ ದಾರಿ ಹಿಡಿದಿದ್ದೇನೆ. ಶ್ರೀಮಠದ ಭಕ್ತರು ಹಾಗೂ ನೇಗಿನಹಾಳ ಗ್ರಾಮಸ್ಥರು ಎಲ್ಲರೂಸೇರಿಕೊಂಡು ಶ್ರೀಮಠವನ್ನು ಮುನ್ನಡೆಸಿ. ಹಡೆದ ತಾಯಿ ನನ್ನನ್ನು ಕ್ಷಮಿಸಿಬಿಡು. ಶ್ರೀಮಠದ ಮಕ್ಕಳೇ ನನ್ನನ್ನು ಕ್ಷಮಿಸಿ. ನನ್ನ ಪಯಣ ಬಸವ ಮಡಿವಾಳೇಶ್ವರನೆಡೆಗೆ. ಜೈ ಬಸವೇಶ, ಜೈ ಮಡಿವಾಳೇಶ. ಶರಣು ಶರಣಾರ್ಥಿ. ಜಗದ್ಗುರು ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಮಠ. ಬಸವ ಸಿದ್ಧಲಿಂಗ ಸ್ವಾಮಿಗಳು'
ಇಷ್ಟು ಮಾಹಿತಿ ಡೆತ್ ನೋಟನಲ್ಲಿದೆ. ಕೊನೆಗೆ ಮೂರು ಗೆರೆ ಎಳೆಯಲಾಗಿದೆ.
ಚಿತ್ರದುರ್ಗ ಮಠದಲ್ಲೇ ಶಿಕ್ಷಣ
ಬಸವಸಿದ್ಧಲಿಂಗ ಸ್ವಾಮೀಜಿ ಅವರ ಬಾಲ್ಯದ ಶಿಕ್ಷಣ ಹಾಗೂ ಅಧ್ಯಾತ್ಮ ಬೋಧನೆ ಚಿತ್ರದುರ್ಗದ ಮುರುಘಾ ಮಠದಲ್ಲೇ ಆಗಿದೆ.
1972ರಲ್ಲಿ ಜನಿಸಿದ ಅವರು 2007ರಲ್ಲಿ ಮಡಿವಾಳೇಶ್ವರ ಮಠದ ಪೀಠ ಅಲಂಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.