ADVERTISEMENT

ಉತ್ತರದ ಕೂಗಿಗೆ ಸ್ಪಂದಿಸಿದ ಸರ್ಕಾರ

9 ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ಸಚಿವ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 20:14 IST
Last Updated 19 ಡಿಸೆಂಬರ್ 2018, 20:14 IST
ಸಿದ್ದರಾಮಯ್ಯ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೆವಣ್ಣ ಹಾಗೂ ಇತರರು –ಪ್ರಜಾವಾಣಿ ಚಿತ್ರ
ಸಿದ್ದರಾಮಯ್ಯ ಅವರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೆವಣ್ಣ ಹಾಗೂ ಇತರರು –ಪ್ರಜಾವಾಣಿ ಚಿತ್ರ   

ಬೆಳಗಾವಿ: ಅಭಿವೃದ್ಧಿ ವಿಷಯದಲ್ಲಿ ಅವಕೃಪೆಗೆ ಒಳಗಾಗಿದ್ದೇವೆ ಎಂಬ ಉತ್ತರ ಕರ್ನಾಟಕದ ಜನರ ಕೂಗಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ, ಪ್ರಮುಖ 9 ಕಚೇರಿಗಳನ್ನು ಅತ್ತ ಸ್ಥಳಾಂತರಿಸುವ ತೀರ್ಮಾನವನ್ನು ಕೈಗೊಂಡಿದೆ.

ಬುಧವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಯಿತು.

ಯಾವ ಕಚೇರಿಗಳನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಎಂಬ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಇತ್ತೀಚೆಗೆ ವರದಿ ಸಲ್ಲಿಸಿತ್ತು. ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

ADVERTISEMENT

ಬೆಳಗಾವಿಯ ಸುವರ್ಣ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸಲು ವಿಧಾನಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸಭಾಪತಿ ಅನುಮತಿ ಬೇಕಿದೆ.ಅವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉತ್ತರ ಕರ್ನಾಟಕದ ಜನರ ಅನುಕೂಲಕ್ಕಾಗಿ ಬೆಳಗಾವಿಯ ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂಬುದು ಅಲ್ಲಿನ ಜನರು ಹಲವು ವರ್ಷಗಳಿಂದ ಹಕ್ಕೊತ್ತಾಯ ಮಂಡಿಸಿದ್ದರು. ಸುವರ್ಣ ಸೌಧ, ಕಲಬುರ್ಗಿ ಹಾಗೂ ವಿಜಯ‍ಪುರಕ್ಕೆ ಹಲವು ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಹೋರಾಟಗಾರರಿಗೆ ಅಭಯ ನೀಡಿದ್ದರು. ಉತ್ತರದ ಉದ್ಧಾರಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು.

ಈ ಸಂಬಂಧ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ನೇತೃತ್ವದ ಸಮಿತಿಗೆ ಸೂಚಿಸಿದ್ದರು. ಈ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯ ಬಗ್ಗೆ ಸೆಪ್ಟೆಂಬರ್‌ 6ರಂದು ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆದಿತ್ತು. ಇದೀಗ ಅಂತಿಮ ತೀರ್ಮಾನ ತೆಗೆದು
ಕೊಳ್ಳಲಾಗಿದೆ.

ಸಂಪುಟದ ತೀರ್ಮಾನಗಳು:

* ರಾಜ್ಯದಲ್ಲಿ ₹1,100 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ವೇರ್‌ಹೌಸ್. 17 ಲಕ್ಷ ಟನ್‌ ಸಂಗ್ರಹ ಸಾಮರ್ಥ್ಯ ಇರುವ ಏಳು ವೇರ್‌ಹೌಸ್‌‌ಗಳು ನಿರ್ಮಾಣವಾಗಲಿವೆ.

* ಜಯದೇವ ಆಸ್ಪತ್ರೆಯ ಇನ್ನೊಂದು ಘಟಕಕ್ಕೆ ₹50 ಕೋಟಿ.

* ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ₹306 ಕೋಟಿ ಮಂಜೂರು

* ಹೊಳೆನರಸೀಪುರ ಮಾವಿನಕೆರೆ ರೈಲು ನಿಲ್ದಾಣದ ನಡುವೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣಕ್ಕೆ ₹15.9 ಕೋಟಿ ಕಾಮಗಾರಿಗೆ ಆಡಳಿತಾತ್ಮಕ ಅನು ಮೋದನೆ.

* ಚಿಕ್ಕಮಗಳೂರು ತಾಲ್ಲೂಕು ಖಾಂಡ್ಯ ಹೋಬಳಿಯ ದೇವದಾನ ಗ್ರಾಮದಲ್ಲಿ ಅದಮಾರುಮಠ ವಿದ್ಯಾಸಂಸ್ಥೆಗೆ ಗುತ್ತಿಗೆ ನೀಡಿರುವ 18 ಎಕರೆ ಜಮೀನನ್ನು ಕಾಯಂಆಗಿ ಅದೇ ಸಂಸ್ಥೆಗೆ ಮಂಜೂರು.

* ಗೋಕಾಕ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಆರ್‌ಸಿಸಿ ಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣದ ₹16.85 ಕೋಟಿ ಕಾಮಗಾರಿಗೆ ಅನುಮೋದನೆ.

ಯಾವ ಕಚೇರಿಗಳು ಸ್ಥಳಾಂತರ

* ಕೃಷ್ಣಾ ಭಾಗ್ಯ ಜಲ ನಿಗಮ

* ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಹಾಗೂ ನೋಂದಾಯಿತ ಕಚೇರಿಗಳು.

* ಕರ್ನಾಟಕ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ

* ಸಕ್ಕರೆ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ.

* ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಅದನ್ನು ವಿಭಜಿಸಿ ಉತ್ತರ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪನೆ.

* ಕರ್ನಾಟಕ ಮಾನವ ಹಕ್ಕು ಆಯೋಗದ ಒಬ್ಬರು ಸದಸ್ಯರ ಕಚೇರಿ ಸ್ಥಳಾಂತರ.

* ಇಬ್ಬರು ಮಾಹಿತಿ ಹಕ್ಕು ಆಯುಕ್ತರ ಕಚೇರಿ.

* ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆಯ ನಿರ್ದೇಶನಾಲಯ

* ಉಪಲೋಕಾಯುಕ್ತರ ಒಂದು ಕಚೇರಿ ಸ್ಥಳಾಂತರ

ರಮೇಶ ಜಾರಕಿಹೊಳಿ ಗೈರು
ಸಚಿವ ಸಂಪುಟ ಸಭೆಗೆ ‍ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಗೈರುಹಾಜರಾಗಿದ್ದರು. ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸದನಕ್ಕೆ ಬಂದಿರಲಿಲ್ಲ. ಬುಧವಾರ ಕೆಲಹೊತ್ತು ಸದನದಲ್ಲಿ ಕಾಣಿಸಿಕೊಂಡಿದ್ದರು. ಮುಖ್ಯಮಂತ್ರಿ ಜತೆಯಲ್ಲಿ ಮಧ್ಯಾಹ್ನ ಊಟ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಸಂಜೆಯವರೆಗೂ ಸುವರ್ಣಸೌಧದ ಸಚಿವರ ಕೊಠಡಿಯಲ್ಲಿದ್ದರು. ಆದರೆ, ಸಚಿವ ಸಂಪುಟ ಸಭೆಗೆ ಹಾಜರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.