ADVERTISEMENT

ವಿಧಾನ ಪರಿಷತ್‌: ಉಮಾಶ್ರೀ ಹೆಸರು ’ಮಾಲಾಶ್ರೀ‘ ಆದಾಗ...

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 0:31 IST
Last Updated 16 ಡಿಸೆಂಬರ್ 2023, 0:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಿಧಾನ ಪರಿಷತ್‌: 2023ನೇ ಸಾಲಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯ ವೇಳೆಯಲ್ಲಿ ಬಿಜೆಪಿಯ ಎಚ್‌. ವಿಶ್ವನಾಥ್‌ ಅವರು ಉಮಾಶ್ರೀ ಹೆಸರು ಉಲ್ಲೇಖಿಸುವಾಗ ಬಾಯಿತಪ್ಪಿ ಮಾಲಾಶ್ರೀ ಎಂದು ಸಂಬೋಧಿಸಿದ್ದು ಕೆಲಹೊತ್ತು ಸದನವನ್ನು ನಗೆಗಡಲಲ್ಲಿ ತೇಲಿಸಿತು. ಉಮಾಶ್ರೀ ಅವರ ನಟನೆ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಯಿತು.

ವಿಶ್ವನಾಥ್‌ ಅವರು ಮಾಲಾಶ್ರೀ ಎಂದಾಗ ಇಡೀ ಸದನದಲ್ಲಿ ನಗೆ ಉಕ್ಕಿತು. ‘ಮಾಲಾಶ್ರೀಯವರ ನೆನಪು ಈಗೇಕೆ ನಿಮಗೆ ಬಂತು’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯ ಮಾಡಿದರು. 

ADVERTISEMENT

ಮಧ್ಯಪ್ರವೇಶಿಸಿದ ಬಿಜೆಪಿಯ ತೇಜಸ್ವಿನಿ ಗೌಡ, ‘ಭಾರತದಲ್ಲಿ ಹೇಮಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ದರೊ, ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ತಮ್ಮ ನಟನೆಯಿಂದ ಹೆಸರು ಮಾಡಿದ್ದಾರೆ. ನಾಯಕಿ ಆಗಲು ಸೌಂದರ್ಯವೇ ಮಾನದಂಡ. ನಟನೆಯ ಮಾನದಂಡದ ಮೇಲೆ ಆಯ್ಕೆ ಮಾಡುವುದಿದ್ದರೆ ಉಮಾಶ್ರೀ ನಾಯಕಿಯಾಗಿ ಹಲವು ಚಿತ್ರದಲ್ಲಿ ನಟಿಸಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಆಗ ಎದ್ದು ನಿಂತ ಉಮಾಶ್ರೀ, ‘ನಾನು ರಂಗಭೂಮಿಯಿಂದ ಬಂದವಳು. ರಂಗಭೂಮಿಯಲ್ಲಿ ನಾಯಕಿ, ಪೋಷಕ ನಟಿ, ಹಾಸ್ಯ ನಟಿ ಎಂಬ ವರ್ಗವಿಲ್ಲ. ಸಿನಿಮಾದಲ್ಲಿದೆ. ಗಿರೀಶ್ ಕಾಸರವಳ್ಳಿಯವರು ನನಗೆ ‘ಗುಲಾಬಿ’ ಚಿತ್ರದಲ್ಲಿ ನಾಯಕಿ ನಟಿಯ ಅವಕಾಶ ನೀಡಿದ್ದು, ಅದರಿಂದ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿ ಬಂತು’ ಎಂದು ಹೇಳಿದರು. 

ಸಚಿವ ಎಚ್. ಕೆ. ಪಾಟೀಲ, ‘ಉಮಾಶ್ರೀಯವರ ‘ಒಡಲಾಳ’ ನಾಟಕ ನೋಡಿದರೆ, ಅವರು ಎಂತಹ ಅದ್ಭುತ ಕಲಾವಿದೆ ಎಂದು ಗೊತ್ತಾಗಲಿದೆ. ಈ ನಾಟಕವನ್ನು ಸೋನಿಯಾ ಗಾಂಧಿಯವರಿಗೆ ತೋರಿಸಿದ್ದೆವು. ಆ ನಂತರ ಉಮಾಶ್ರೀ ಅವರನ್ನು ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ? ಎಂದು ಮೂರು ಬಾರಿ ಕೇಳಿದರು’ ಎಂದರು.

‘ಉಮಾಶ್ರೀ ಅವರಿಗೆ ನಾಟಕ ಅಕಾಡೆಮಿಯಿಂದ ಜೀವಮಾನದ ಸಾಧನೆಗೆ ಪ್ರಶಸ್ತಿ ಘೋಷಣೆ ಆಗಿದ್ದರೂ ರಾಜಕೀಯ ಕಾರಣಗಳಿಗೆ ಆ ಪ್ರಶಸ್ತಿ ಪ್ರದಾನ ನಡೆದಿಲ್ಲ’ ಎಂದು ವಿಶ್ವನಾಥ್‌ ಪ್ರಸ್ತಾಪಿಸಿದರು. ಅದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ‘ಎರಡು ವರ್ಷಗಳಿಂದ ಪ್ರಶಸ್ತಿಗಳ ಪ್ರದಾನ ನಡೆದಿಲ್ಲ. ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಇಬ್ಬರು ನಿಧನರಾಗಿದ್ದಾರೆ. ಈ ಬಾರಿಯ ಪ್ರಶಸ್ತಿಯನ್ನೂ ಸೇರಿಸಿ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.