ADVERTISEMENT

ಬೆಳಗಾವಿ ಅಧಿವೇಶನ: ಪ್ರತಿಭಟನೆ ಕೈಬಿಟ್ಟ ದೃಶ್ಯ ಮಾಧ್ಯಮ ಪ್ರತಿನಿಧಿಗಳು

ಮಾಧ್ಯಮಗಳ ನಿರ್ಬಂಧ: ನಾನು ನಿರ್ದೇಶನ ನೀಡಿಲ್ಲ– ಸಭಾಧ್ಯಕ್ಷ ಕಾಗೇರಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 6:26 IST
Last Updated 22 ಡಿಸೆಂಬರ್ 2021, 6:26 IST
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಳಗಾವಿ (ಸುವರ್ಣ ವಿಧಾನಸೌಧ): ಸುವರ್ಣಸೌಧದ ಕಾರಿಡಾರ್ ಒಳಗೆ ಹೋಗದಂತೆ ಸುದ್ದಿ ವಾಹಿನಿಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳು ಸುವರ್ಣ ವಿಧಾನಸೌಧದ ಮುಖ್ಯದ್ವಾರದ ಬಳಿ ದಿಢೀರ್‌ ಪ್ರತಿಭಟನೆ ನಡೆಸಿದರು.

ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನನ್ನ ಕಡೆಯಿಂದ ಯಾವುದೇ ನಿರ್ದೇಶನ ಆಗಿಲ್ಲ. ನಾನು ಮಾಧ್ಯಮಗಳ ನಿರ್ಬಂಧ ಕುರಿತು ಯಾವುದೇ ನಿರ್ದೇಶನ ಮಾಡಿಲ್ಲ. ಯಾಕೆ ಈ ಗೊಂದಲ ಸೃಷ್ಟಿಯಾಗಿದೆಯೋ ಗೊತ್ತಿಲ್ಲ. ದಯಮಾಡಿ ಮಾಧ್ಯಮ ಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಿ’ ಎಂದು ಮನವಿ ಮಾಡಿದರು.

‘ಬೆಳಗಾವಿ ಎಸ್‌ಪಿ ಏನು ಆದೇಶ ಹೊರಡಿಸಿದ್ದಾರೋ ಗೊತ್ತಿಲ್ಲ. ನಾನು ಸರ್ಕಾರಕ್ಕೂ ಈ ಬಗ್ಗೆ ಹೇಳಿದ್ದೇನೆ. ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಮಾಡುವುದಿಲ್ಲ’ ಎಂದರು. ಸಭಾಧ್ಯಕ್ಷರ ಮನವಿಯ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ಕೈಬಿಟ್ಟರು.

ADVERTISEMENT

ಅದಕ್ಕೂ ಮೊದಲು ಕ್ಯಾಮೆರಾಗಳನ್ನು ಸುವರ್ಣ ವಿಧಾನಸೌಧದ ಒಳಗಡೆ ತರದಂತೆ ಪೊಲೀಸರು ತಡೆದರು. ಇದನ್ನು ಪ್ರತಿಭಟಿಸಿ ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು. ಮತಾಂತರ ನಿಷೇಧ ಮಸೂದೆಯ ಗದ್ದಲದ ವರದಿ ಮಾಡದಂತೆ ಮಾಧ್ಯಮಗಳನ್ನು ತಡೆಯುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ದೂರಿದರು.

ಆದರೆ, ಈ ರೀತಿಯ ನಿರ್ಬಂಧವನ್ನು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಧಿಸಿದ್ದರು ಎಂದು ಗೊತ್ತಾಗಿದೆ.

ಎಸ್‌ಪಿ ಆದೇಶದಲ್ಲಿ ಏನಿದೆ?

‘ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಡಿ. 24 ರವರೆಗೆ ನಡೆಯಲಿದೆ. ಮಾಧ್ಯಮ‌ ಪ್ರತಿನಿಧಿಗಳಿಗೆ ಕಲಾಪಗಳ ವರದಿಗಾರಿಕೆಗಾಗಿ ಪ್ರವೇಶಪತ್ರಗಳನ್ನು ನೀಡಲಾಗಿದೆ. ಅದೇ ರೀತಿ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳ ಬೈಟ್ ಪಡೆಯಲು ಅನುಕೂಲವಾಗುವಂತೆ ಪಶ್ಚಿಮ ದ್ವಾರದ ಬಳಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಆಧರೂ ಕೆಲವರು ಸುವರ್ಣ ವಿಧಾನಸೌಧದ ಎಲ್ಲ ಮಹಡಿಗಳ ಕಾರಿಡಾರ್‌ನಲ್ಲಿ ಚಿತ್ರೀಕರಣ ಹಾಗೂ ಜನಪ್ರತಿನಿಧಿಗಳ ಸಂದರ್ಶನ ಮಾಡುತ್ತಿರುವುದು ಕಂಡುಬಂದಿದೆ.ಮಾದ್ಯಮ ಪ್ರತಿನಿಧಿಗಳು ಭದ್ರತೆಯ ದೃಷ್ಟಿಯಿಂದ ನಿಗದಿತ ಸ್ಥಳಗಳಲ್ಲಿ ಮಾತ್ರ ಗಣ್ಯರ ಬೈಟ್ ಪಡೆದುಕೊಳ್ಳುವ ಮೂಲಕ ಸಹಕರಿಸಬೇಕು ಎಂದು ಕೋರಲಾಗಿದೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.