ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಕಟ್ಟಡದ ಹೊರ ಭಾಗದಲ್ಲಿ ಪಾಚಿ ಕಟ್ಟಿಕೊಂಡಿದ್ದು, ಕಂದು ಬಣ್ಣಕ್ಕೆ ತಿರುಗಿದೆ. ಇದು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆಯೇ ಎನ್ನುವ ಅನುಮಾನ ಮೂಡುವುದಕ್ಕೆ ಕಾರಣವಾಗಿದೆ.
ಸತತ ಮಳೆಯ ಕಾರಣದಿಂದಾಗಿ ಸೌಧದ ಕಂಬಗಳು, ಚಾವಣಿ, ಹೊರಗಿನ ಗೋಡೆಗಳಲ್ಲಿ ಪಾಚಿ ಬೆಳೆಯುತ್ತಿದೆ. ಸೌಧವು ಸಹಜ ಸೌಂದರ್ಯ ಕಳೆದುಕೊಂಡಿದೆ. ಕಾಲಕಾಲಕ್ಕೆ ನಿರ್ವಹಣೆಯಲ್ಲಿ ಕೊರತೆ ಎದ್ದು ಕಾಣುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
‘ಬೆಂಗಳೂರಿನ ವಿಧಾನಸೌಧದಲ್ಲಿರುವ ಸಚಿವಾಲಯದ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ತಿಂಗಳಿಗೆ ಒಮ್ಮೆಯಾದರೂ ಸಚಿವ ಸಂಪುಟ ಸಭೆಯನ್ನು ಇಲ್ಲಿ ನಡೆಸುವಂತಾಗಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳನ್ನು ಇಲ್ಲಿಯೇ ಕೈಗೊಳ್ಳಬೇಕು. ಈ ಮೂಲಕ ಸೌಧವನ್ನು ಇಲ್ಲಿನ ಶಕ್ತಿ ಸೌಧವನ್ನಾಗಿ ಮಾಡಬೇಕು’ ಎಂಬ ಇಲ್ಲಿನ ಜನರ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಹಲವು ವರ್ಷಗಳಿಂದಲೂ ಪ್ರತಿಭಟನೆ ನಡೆಯುತ್ತಿದೆಯಾದರೂ ಮನ್ನಣೆ ದೊರೆತಿಲ್ಲ. ಮಾಹಿತಿ ಆಯೋಗದ ಆಯುಕ್ತರ ಕಚೇರಿಯಷ್ಟೇ ಇಲ್ಲಿ ಕಾರ್ಯಾರಂಭ ಮಾಡಿರುವ ರಾಜ್ಯಮಟ್ಟದ ಕಚೇರಿಯಾಗಿದೆ. ಈ ನಡುವೆ, ನಿರ್ವಹಣೆಗೂ ಒತ್ತ ಕೊಡದಿರುವುದು ಇಲ್ಲಿನ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಬಳಕೆಯೇ ಕಡಿಮೆ:ವರ್ಷಕ್ಕೊಮ್ಮೆ 10 ದಿನಗಳ ವಿಧಾನಮಂಡಲ ಅಧಿವೇಶನ ನಡೆಸಲಾಗುತ್ತಿತ್ತು. ಹೋದ ವರ್ಷ ನೆರೆ ಪರಿಹಾರ ಕಾರ್ಯದ ನೆಪವೊಡ್ಡಿ ಅಧಿವೇಶನ ನಡೆಸಲಿಲ್ಲ. ಜಿಲ್ಲಾಡಳಿತದಿಂದ ಆಗೊಮ್ಮೆ ಈಗೊಮ್ಮೆ ಕಾರ್ಯಾಗಾರ, ವಿಚಾರಸಂಕಿರಣ ನಡೆಯುತ್ತದೆ. ಇದನ್ನು ಬಿಟ್ಟರೆ, ಉಳಿದ ದಿನಗಳಲ್ಲಿ ಚಟುವಟಿಕೆ ಇರುವುದಿಲ್ಲ. ಈ ಬಾರಿ ಕೋವಿಡ್ ಕಾರಣದಿಂದ ನಿರ್ವಹಣೆಯತ್ತ ಗಮನ ಕೊಡಲಾಗಿಲ್ಲ ಎನ್ನಲಾಗುತ್ತಿದೆ.
‘ಸುವರ್ಣ ವಿಧಾನಸೌಧಕ್ಕೆ ಬಣ್ಣ ಬಳಿಯಬೇಕಾಗಿಲ್ಲ; ತಾನಾಗಿಯೇ ಬಳಿದುಕೊಳ್ಳುತ್ತದೆ ಎನ್ನುವುದನ್ನು ಅಲ್ಲಿ ಪಾಚಿ ಕಟ್ಟಿರುವುದನ್ನು ನೋಡಿದರೆ ಗೊತ್ತಾಗುತ್ತದೆ! ಪ್ರತಿ ವರ್ಷ ಮಳೆಗಾಲದಲ್ಲಿ ಈ ತೊದರೆ ಆಗುತ್ತದೆ; ಸ್ವಚ್ಛಗೊಳಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿರುತ್ತಾರೆ. ಅಲ್ಲಿಗೆ ಈ ಭಾಗದ ಜನರಿಗೆ ಅನುಕೂಲ ಆಗುವಂತಹ ರಾಜ್ಯಮಟ್ಟದ ಕಚೇರಿಗಳು ಸ್ಥಳಾಂತರಗೊಳ್ಳಬೇಕು ಎನ್ನುವ ಬೇಡಿಕೆ ಹಾಗೆಯೇ ಉಳಿದಿದೆ. ಕನಿಷ್ಠ, ಸ್ವಚ್ಛಗೊಳಿಸುವ ಹಾಗೂ ನಿರ್ವಹಣೆ ನೋಡಿಕೊಳ್ಳುವ ಕೆಲಸವಾದರೂ ನಿಯಮಿತವಾಗಿ ನಡೆಯದಿರುವುದು ಖಂಡನೀಯ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ.
ಕೆಲವೇ ಕಚೇರಿ ಬಂದಿವೆ: ನಗರದಲ್ಲಿರುವ 23 ಜಿಲ್ಲಾ ಮಟ್ಟದ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಆದರೆ, ಕೋವಿಡ್ ಬಿಕ್ಕಟ್ಟಿನ ಕಾರಣದಿಂದ ಆ ಕಾರ್ಯವೂ ಸಮರ್ಪಕವಾಗಿ ನಡೆದಿಲ್ಲ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಸುವರ್ಣ ವಿಧಾನಸೌಧಕ್ಕೆ ಜಿಲ್ಲಾ ಮಟ್ಟದ 8 ಕಚೇರಿಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಉಳಿದವನ್ನೂ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಕಚೇರಿಗಳು ಅಲ್ಲಿ ಕಾರ್ಯಾರಂಭ ಮಾಡುತ್ತಿದ್ದಂತೆಯೇ ನಿರ್ವಹಣೆಯು ತಾನಾಗಿಯೇ ಆಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.