ಬೆಂಗಳೂರು: ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಥಳಿತಕ್ಕೆ ಒಳಗಾದ ಸಂತ್ರಸ್ತೆಯನ್ನು ವಿನಾಕಾರಣ ಸಂದರ್ಶಕರು ಭೇಟಿ ಮಾಡದಂತೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
"ಯಾವುದೇ ವ್ಯಕ್ತಿ, ಗುಂಪುಗಳು, ಸಂಘಗಳು, ರಾಜಕೀಯ ಪಕ್ಷಗಳು ಅಥವಾ ಪ್ರತಿನಿಧಿಗಳು ಸಂತ್ರಸ್ತೆಯನ್ನು ಭೇಟಿ ಮಾಡಬಾರದು" ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.
ಈ ಸಂಬಂಧ ಈಗಾಗಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್, ಶನಿವಾರ ಇಂಗ್ಲಿಷ್ ಟಿ.ವಿ.ಚಾನೆಲ್ ವೊಂದರಲ್ಲಿ ಈ ಕುರಿತಂತೆ ಪ್ರಸಾರವಾದ ಸನ್ನಿವೇಶವನ್ನು ವೀಕ್ಷಿಸಿದ ಬೆನ್ನಲ್ಲೇ ಪ್ರಕರಣದ ತುರ್ತು ವಿಚಾರಣೆಯನ್ನು ತನ್ನ ಚೇಂಬರ್ ನಲ್ಲಿ ನಡೆಸಿತು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, "ಆಸ್ಪತ್ರೆಯ ಉಸ್ತುವಾರಿ ವೈದ್ಯಾಧಿಕಾರಿ ಅಥವಾ ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪೂರ್ವ ಲಿಖಿತ ಅನುಮತಿಯನ್ನು ಹೊರತುಪಡಿಸಿ ಇತರರು ಸಂತ್ರಸ್ತೆಯನ್ನು ಭೇಟಿ ಮಾಡುವುದನ್ನು ನಿರ್ಬಂಧಿಸಬೇಕು" ಎಂದು ಆದೇಶಿಸಿತು.
"ಅಗತ್ಯ ಇದೆ ಎಂದಾಗ ಮಾತ್ರವೇ; ಕುಟುಂಬದ ಸದಸ್ಯರು, ಶಾಸನಬದ್ಧ ಪ್ರಾಧಿಕಾರಗಳು, ಆಯೋಗಗಳು, ತನಿಖಾ ಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳು ಸಂತ್ರಸ್ತೆಯನ್ನು ಭೇಟಿ ಮಾಡಬಹುದು" ಎಂದು ಹೇಳಿತು.
"ಸಂತ್ರಸ್ತರನ್ನು ನೋಡಲು ಜನರು ಆಸ್ಪತ್ರೆಗೆ ಭೇಟಿ ನೀಡುವುದು ವಿಶೇಷವೇನೂ ಅಲ್ಲ. ನ್ಯಾಯಾಲಯವು ಸಾಮಾನ್ಯವಾಗಿ ಯಾವುದೇ ನಾಗರಿಕನ ಚಲನೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸಲೂ ಇಷ್ಟಪಡುವುದಿಲ್ಲ; ಆದರೆ, ಈ ಪ್ರಕರಣದಲ್ಲಿನ ಸಂತ್ರಸ್ತೆಗೆ ಸದ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಈಗಾಗಲೇ ಅಸಹನೀಯ ಆಘಾತ ಅನುಭವಿಸಿದ್ದಾರೆ. ನಮ್ಮ ಅಭಿಪ್ರಾಯದಲ್ಲಿ, ಸಂದರ್ಶಕರ ಹರಿವು ಸಂತ್ರಸ್ತೆಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು ಮತ್ತು ಆಕೆ ತೊಂದರೆಗೆ ಒಳಗಾಗಬಹುದು" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಖುದ್ದು ಹಾಜರಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳನ್ನೂ ನ್ಯಾಯಪೀಠಕ್ಕೆ ಸಾದ್ಯಂತವಾಗಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.