ಮಂಡ್ಯ: 'ಇಡೀ ಸರ್ಕಾರ ಬೆಳಗಾವಿಯಲ್ಲೇ ಇದ್ದ ಸಮಯದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ನಡೆದದ್ದು ತಲೆ ತಗ್ಗಿಸುವ ಸಂಗತಿ. ಸರ್ಕಾರ ಈ ಪ್ರಕರಣದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಭ್ರೂಣಹತ್ಯೆ ಖಂಡಿಸಿ ಬಿಜೆಪಿಯು ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಸರ್ಕಾರದ ಪ್ರತಿನಿಧಿಗಳು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾ ಮಂತ್ರಿ, ಮುಖ್ಯಮಂತ್ರಿ, ಗೃಹ ಸಚಿವರು ಯಾರೂ ಘಟನಾ ಸ್ಥಳಕ್ಕೆ ಹೋಗಲಿಲ್ಲ. ದೇಶವ್ಯಾಪಿ ಪ್ರತಿಭಟನೆ ನಡೆದ ಬಳಿಕ ಮುಖ್ಯಮಂತ್ರಿ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಲ್ಲದಿದ್ದರೆ ಈ ಪರಿಹಾರವನ್ನೂ ನೀಡುತ್ತಿರಲಿಲ್ಲ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ನಿಲುವಳಿ ಸೂಚನೆ ತಂದಿದ್ದೆ. ದಲಿತ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ಚರ್ಚೆಯ ಅಜೆಂಡಾದಲ್ಲಿತ್ತು. ಆದರೆ ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಉತ್ತರ ನೀಡಿ, ಸಮಯ ವ್ಯರ್ಥ ಮಾಡಿದರು. ಮಹಿಳೆ ಪ್ರಕರಣ ಚರ್ಚೆಗೆ ಬರುತ್ತದೆ ಎಂದು ಪಲಾಯನ ಮಾಡಿದರು’ ಎಂದು ದೂರಿದರು.
‘ಘಟನಾ ಸ್ಥಳ ಪರಿಶೀಲನೆಗೆ ನಾಲ್ಕು ದಿನವಾದ ಮೇಲೆ ದೆಹಲಿಯಿಂದ ನಿಯೋಗ ಬರುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. 4 ದಿನ ನೀವು ಘಟನೆ ಮುಚ್ಚಿ ಹಾಕಿದ್ರಿ. ಯಾರು ಹೋಗದ ಹಾಗೇ ನೋಡಿಕೊಂಡಿದ್ದೀರಿ. ನಾನು ಅಲ್ಲಿಗೆ ಹೋಗುವವರೆಗೂ ಘಟನೆ ಬಗ್ಗೆ ಗೊತ್ತಾಗಿರಲಿಲ್ಲ. ಅಲ್ಲಿ ನಡೆದ ಘಟನೆ ಬಗ್ಗೆ ಹೇಳಲು ಆಗಲ್ಲ. ಅಷ್ಟು ಹೊಲಸಾಗಿ ನಡೆದಿದೆ. ನ್ಯಾಯಾಲಯ ಕೂಡ ಕಾಂಗ್ರೆಸ್‌ಗೆ ಛೀಮಾರಿ ಹಾಕಿದೆ’ ಎಂದು ಹೇಳಿದರು.
‘ಸಂತಸ್ತ ಮಹಿಳೆ ಈಗ ಆಸ್ಪತ್ರೆಯಲ್ಲಿದ್ದಾರೆ. ಮುಂದೆ ಊರಲ್ಲಿ ಹೇಗೆ ಬದುಕುತ್ತಾರೆ? ಕಾನೂನು ಸುವ್ಯವಸ್ಥೆ ಹೇಗೆ ಹಾಳಾಗಿದೆ ಎಂಬುದಕ್ಕೆ ಇದು ಉದಾಹರಣೆ. ಇಷ್ಟಾದರೂ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಡದೆ ಮೋಸ ಮಾಡಿದ್ದಾರೆ. ಸ್ಪೀಕರ್ ಕೂಡ ಮಲತಾಯಿ ಧೋರಣೆ ತೋರಿದ್ದಾರೆ’ ಎಂದು ದೂರಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಉಮೇಶ್, ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಅಶೋಕ್ ಜಯರಾಮ್,ಇಂಡುವಾಳು ಸಚ್ಚಿದಾನಂದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.