ಹುಬ್ಬಳ್ಳಿ: 'ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರೇ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಹೀಗಿದ್ದಾಗ ಬೆಳಗಾವಿ ಪ್ರಕರಣ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಬೆಳಗಾವಿಯ ವಂಟಮುರಿಯಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಆದರೆ, ಅದನ್ನಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಷ್ಟ್ರಿಯ ಮಹಿಳಾ ಆಯೋಗ ಮತ್ತು ಬಿಜೆಪಿ ಮಹಿಳಾ ಸಂಸದರು, ಪ್ರಲ್ಹಾದ ಜೋಶಿ ಮತ್ತು ಜೆ.ಪಿ. ನಡ್ಡಾ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರಿಗೆ ಶಿಕ್ಷೆ ಆಗಿರುವುದು ಸಚಿವ ಪ್ರಹ್ಲಾದ ಜೋಶಿಗೆ ಗೊತ್ತಿಲ್ಲವೇ?' ಎಂದು ಕಿಡಿಕಾರಿದರು.
'ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದೆ' ಎಂದರು.
'ಸಂಸತ್ ಒಳಗೆ ಯುವಕರು ನುಗ್ಗಿದ ವಿಷಯ ಕುರಿತು ಕಾಂಗ್ರೆಸ್ ಭದ್ರತಾ ಲೋಪ ವಿಷಯವಾಗಿ ರಾಜಕೀಯ ಮಾಡುತ್ತಿದೆ' ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಲೋಪ ಆಗಿರೋದು ಸತ್ಯವೋ ಸುಳ್ಳೋ? ಲೋಪ ಆದಾಗ ಆರೋಪ ಮಾಡುವುದು ತಪ್ಪೇ' ಎಂದು ಪ್ರಶ್ನಿಸಿದರು.
'ಯಾತಿಂದ್ರ ಅವರಿಗೆ ಲೋಕಸಭೆಗೆ ನಿಲ್ಲಿಸಲು ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗಿದೆ' ಎಂಬ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹೇಳಿಕೆಗೆ ಕಿಡಿಕಾರಿದ ಸಿಎಂ, 'ಲೆಹರ್ ಸಿಂಗ್ ಊಹೆ ಮೇಲೆ ಹಾಗೆ ಮಾತನಾಡಿದ್ದಾರೆ. ಬಿಜೆಪಿಯವರಿಗೆ ಸ್ವಲ್ಪ ಬುದ್ಧಿ ಕಡಿಮೆ ಅನಿಸುತ್ತದೆ. ಯತೀಂದ್ರ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲ್ಲ. ಜನರು ಬಂದು ಸ್ಪರ್ಧಿಸುವಂತೆ ಒತ್ತಾಯಿಸಿದರೆ ನಿಲ್ಲಬಹುದು. ಇಲ್ಲ ಅಂದ್ರೆ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ' ಎಂದರು.
ಮೈಸೂರ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರವಾಗಿ ಮಾತನಾಡಿದ ಸಿಎಂ, 'ಸರ್ಕಾರ ಇನ್ನೂ ಆ ಕುರಿತು ಯಾವ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.