ಬೆಂಗಳೂರು: ‘ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿದ್ದ ಕಬ್ಬಿಣದ ಅದಿರಿನ ಕಳವು ಮತ್ತು ರಫ್ತು ಮಾಡಿದ ಅಪರಾಧದಲ್ಲಿ ಜೈಲು ಸೇರಿರುವ ದೋಷಿಗಳು; ಈ ರಾಷ್ಟ್ರದ ಅರಣ್ಯ ಸಂಪನ್ಮೂಲ ದೋಚಿದ ಲೂಟಿಕೋರರಾಗಿದ್ದು ಅವರ ಜಾಮೀನು ಮನವಿಯನ್ನು ಸುತಾರಾಂ ಪುರಸ್ಕರಿಸಬಾರದು’ ಎಂದು ಸಿಬಿಐ ಹೈಕೋರ್ಟ್‌ಗೆ ಮನವಿ ಮಾಡಿದೆ.
ಈ ಸಂಬಂಧ ಪ್ರಕರಣದ ದೋಷಿಗಳಾದ ಖಾರದಪುಡಿ ಮಹೇಶ್ ಮತ್ತು ಪ್ರೇಮ್‌ಚಂದ ಗರಗ್ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ಅರ್ಜಿದಾರರ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ‘ಈ ಪ್ರಕರಣ ಸಾಮಾನ್ಯ 420 ಕೇಸ್ ಅಲ್ಲ. ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ಘೋರ ಪ್ರಕರಣ. ಇದನ್ನು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದೆ. ವಿಚಾರಣೆ ಆರಂಭವಾದಾಗಿನಿಂದಲೂ ಸುಪ್ರೀಂ ಕೋರ್ಟ್ ಈ ಬಗ್ಗೆ ತೀವ್ರ ನಿಗಾ ಇರಿಸಿದೆ. ಇದರ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು 400 ಪುಟಗಳಷ್ಟಿದೆ. ಹಾಗಾಗಿ, ಆಕ್ಷೇಪಣೆ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಬೇಕು’ ಎಂದು ಮನವಿ ಮಾಡಿದರು.
ಅರ್ಜಿದಾರ ಪ್ರೇಮ್‌ಚಂದ ಗರಗ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮುಕುಲ್ ರೋಹಟಗಿ, ‘ಅರ್ಜಿದಾರರ ಸಹೋದರಿಯ ಪುತ್ರನ ವಿವಾಹ ಗೋವಾದಲ್ಲಿ ನಡೆಯುತ್ತಿದೆ. ಗರಗ್ ಅವರು ಮದುಮಗನ ಸೋದರ ಮಾವನಾಗಿದ್ದು ಮದುವೆಯಲ್ಲಿ ಸಾಂಪ್ರದಾಯಿಕ ಕರ್ತವ್ಯಗಳನ್ನು ನಿಭಾಯಿಸುವ ಅವಶ್ಯ ಇದೆ. ಆದ್ದರಿಂದ, ಇದೇ 8 ರಿಂದ 18ರವರೆಗೆ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದರು.
ಅಂತೆಯೇ, ಮತ್ತೊಬ್ಬ ಅರ್ಜಿದಾರ ಖಾರದಪುಡಿ ಮಹೇಶ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಮತ್ತು ಕಿರಣ್ ಜವಳಿ, ‘ಭಾರತೀಯ ದಂಡ ಸಂಹಿತೆ–1860ರ ಕಲಂ 120ಬಿ ಗೆ ಐದು ವರ್ಷಗಳ ಜೈಲು ಶಿಕ್ಷೆ ಇದೆ. ಹಾಗಾಗಿ, ಈ ಪ್ರಕರಣದಲ್ಲಿ ಅರ್ಜಿದಾರರ ಮನವಿಯನ್ನು ಉದಾರವಾಗಿ ಪರಿಗಣಿಸಬೇಕು’ ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅಂತೆಯೇ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.