ADVERTISEMENT

ಬೇಲೆಕೇರಿ: ಬಿಗಿಭದ್ರತೆ ಮಧ್ಯೆಯೇ ಅದಿರು ಕದ್ದು, ರಫ್ತು

ಜಯಸಿಂಹ ಆರ್.
Published 27 ಅಕ್ಟೋಬರ್ 2024, 0:30 IST
Last Updated 27 ಅಕ್ಟೋಬರ್ 2024, 0:30 IST
<div class="paragraphs"><p>ಬೇಲೇಕೇರಿ ಬಂದರಿನಲ್ಲಿನ ಕಬ್ಬಿಣದ ಅದಿರಿನ ರಾಶಿಗಳು. 2010ರ ಮಾರ್ಚ್‌ 20ರಂದು ವಶಕ್ಕೆ ಪಡೆದಾಗ ಇಂತಹ 56 ರಾಶಿಗಳು ಇದ್ದವು.&nbsp;2010ರ ಜೂನ್‌ 2–5ರ ನಡುವೆ ಪರಿಶೀಲನೆ ನಡೆಸಿದಾಗ, ಅಲ್ಲಿ ಕಬ್ಬಿಣದ ಅದಿರಿನ ಕೆಲವು ರಾಶಿಗಳಷ್ಟೇ ಉಳಿದಿದ್ದವು&nbsp; </p></div>

ಬೇಲೇಕೇರಿ ಬಂದರಿನಲ್ಲಿನ ಕಬ್ಬಿಣದ ಅದಿರಿನ ರಾಶಿಗಳು. 2010ರ ಮಾರ್ಚ್‌ 20ರಂದು ವಶಕ್ಕೆ ಪಡೆದಾಗ ಇಂತಹ 56 ರಾಶಿಗಳು ಇದ್ದವು. 2010ರ ಜೂನ್‌ 2–5ರ ನಡುವೆ ಪರಿಶೀಲನೆ ನಡೆಸಿದಾಗ, ಅಲ್ಲಿ ಕಬ್ಬಿಣದ ಅದಿರಿನ ಕೆಲವು ರಾಶಿಗಳಷ್ಟೇ ಉಳಿದಿದ್ದವು 

   

 –ಚಿತ್ರ: ಪ್ರಜಾವಾಣಿ ಆರ್ಕೈವ್‌

ಬೆಂಗಳೂರು: ಬೇಲೆಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಇರಿಸಲಾಗಿದ್ದ ಕಬ್ಬಿಣದ ಅದಿರಿನಲ್ಲಿ, 6.10 ಲಕ್ಷ ಟನ್‌ ಅದಿರನ್ನು ಕದ್ದು ಎರಡೇ ತಿಂಗಳಲ್ಲಿ ಸಾಗಿಸಲಾಗಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಸೇರಿ ಹಲವರಿಗೆ ಶಿಕ್ಷೆಯಾಗಿದೆ.

ADVERTISEMENT

ರಾಜ್ಯದ ವಿವಿಧ ಗಣಿಗಳಿಂದ ಸಾಗಿಸಿದ್ದ ಕಬ್ಬಿಣದ ಅದಿರನ್ನು ಲೋಕಾಯುಕ್ತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಕಾರವಾರ ಬಳಿಯ ಬೇಲೆಕೇರಿ ಬಂದರಿನಲ್ಲಿ ವಶಕ್ಕೆ ಪಡೆದಿದ್ದರು. ಹೀಗೆ ಬಿಗಿ ಭದ್ರತೆಯಲ್ಲಿ ಇದ್ದ ಅದಿರನ್ನೇ ಕದ್ದು, ರಫ್ತು ಮಾಡಿದ ಪ್ರಕರಣವಿದು.

ರಾಜ್ಯದಲ್ಲಿನ ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ, ಅಕ್ರಮ ಸಾಗಣೆ ಮತ್ತು ರಫ್ತು ಸಂಬಂಧ ತನಿಖೆ ನಡೆಸಿದ್ದ, ಯು.ವಿ.ಸಿಂಗ್‌ ನೇತೃತ್ವದ ಲೋಕಾಯುಕ್ತ ತನಿಖಾ ತಂಡ, ಲೋಕಾಯುಕ್ತರಿಗೆ ವರದಿ ನೀಡಿತ್ತು. ರಾಜ್ಯದಿಂದ ಅಕ್ರಮವಾಗಿ ಸಾಗಿಸಿದ ಅದಿರಿನಲ್ಲಿ ಬಹುತೇಕ ಪ್ರಮಾಣವನ್ನು ಬೇಲೆಕೇರಿ ಬಂದರಿನ ಮೂಲಕ ಅಕ್ರಮವಾಗಿ ರಫ್ತು ಮಾಡಲಾಗಿತ್ತು. 

ತನಿಖೆಯ ಭಾಗವಾಗಿ 2010ರ ಮಾರ್ಚ್‌ 20ರಂದು ಲೋಕಾಯುಕ್ತ, ಲೋಕಾಯುಕ್ತ ಪೊಲೀಸರು ಬೇಲೆಕೇರಿ ಬಂದರಿನ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳೂ ಭಾಗಿಯಾಗಿದ್ದರು. ಲೋಕಾಯುಕ್ತ ಸಿಬ್ಬಂದಿಯು ಅದಿರು ಅಕ್ರಮ ರಫ್ತಿಗೆ ಸಂಬಂಧಿಸಿದ ದಾಖಲೆಗಳು, ಕಂಪ್ಯೂಟರ್‌ಗಳು, ಲೆಕ್ಕಪತ್ರಗಳನ್ನು ವಶಕ್ಕೆ ಪಡೆದಿದ್ದರು. ಬೇಲೆಕೇರಿ ಬಂದರಿನ ಸ್ಟಾಕ್‌ಯಾರ್ಡ್‌ನಲ್ಲಿ, ರಾಶಿ ಮಾಡಲಾಗಿದ್ದ ಕಬ್ಬಿಣದ ಅದಿರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಬಂದರು ನಿರ್ವಹಣಾ ಅಧಿಕಾರಿಗಳ ದಾಖಲೆ ಪುಸ್ತಕಗಳು, ರಫ್ತು ನಿರ್ವಹಣೆ ಮಾಡುತ್ತಿದ್ದ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಮತ್ತು ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪನಿ ಪ್ರೈವೇಟ್‌ ಲಿಮಿಟೆಡ್‌ನ ದಾಖಲೆಗಳ ಆಧಾರದ ಮೇಲೆ, ವಶಕ್ಕೆ ಪಡೆದ ಕಬ್ಬಿಣದ ಅದಿರಿನ ಪ್ರಮಾಣ 8.05 ಲಕ್ಷ ಟನ್‌ಗಳಷ್ಟು ಎಂದು ಅಂದಾಜಿಸಲಾಗಿತ್ತು. ಅದನ್ನು ಬಂದರು ಅಧಿಕಾರಿಗಳ ಭದ್ರತೆಗೆ ನೀಡಲಾಗಿತ್ತು. ಆದರೆ ಮತ್ತೆ 2010ರ ಜೂನ್‌ನಲ್ಲಿ ಪರಿಶೀಲನೆ ನಡೆಸಿದಾಗ, ವಶದಲ್ಲಿದ್ದ ಅದಿರನ್ನು ಕದ್ದು ರಫ್ತು ಮಾಡಿರುವುದು ಪತ್ತೆಯಾಗಿತ್ತು. 

ವಶಕ್ಕೆ ಪಡೆದಿದ್ದ ಅದಿರು 8.05 ಲಕ್ಷ ಟನ್ ಎಂದು ನಮೂದಿಸಿದ್ದರೂ, ಕದ್ದು ರಫ್ತು ಮಾಡಿದ ಮತ್ತು ಬಂದರಿನಲ್ಲಿ ಉಳಿದಿದ್ದ ಅದಿರಿನಲ್ಲಿ ಮೂರು ಬಾರಿ ಲೆಕ್ಕ ಮಾಡಲಾಯಿತು. ಈ ಪ್ರಕಾರ ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದ ಅದಿರಿನ ಪ್ರಮಾಣ 8.82 ಲಕ್ಷ ಟನ್‌ಗಿಂತಲೂ ಹೆಚ್ಚು ಎಂಬ ಲೆಕ್ಕ ಸಿಕ್ಕಿತ್ತು.

  • 8.82 ಲಕ್ಷ ಟನ್‌: 2010ರ ಮಾರ್ಚ್‌ 20ರಂದು ವಶಕ್ಕೆ ಪಡೆದು ಬೇಲೆಕೇರಿ ಬಂದರಿನಲ್ಲಿ ಇರಿಸಲಾಗಿದ್ದ ಕಬ್ಬಿಣದ ಅದಿರಿನ ಪ್ರಮಾಣ

  • 2.72 ಲಕ್ಷ ಟನ್‌: 2010ರ ಜೂನ್‌ 2ರಂದು ಮರುಪರಿಶೀಲನೆ ನಡೆಸಿದಾಗ ಬಂದರಿನಲ್ಲಿ ಉಳಿದಿದ್ದ ಕಬ್ಬಿಣದ ಅದಿರು

  • 6.10 ಲಕ್ಷ ಟನ್‌: 2010ರ ಮಾರ್ಚ್‌ 20ರಿಂದ ಜೂನ್‌2ರ ಮಧ್ಯೆ ಕದ್ದು ರಫ್ತು ಮಾಡಲಾಗಿದ್ದ ಕಬ್ಬಿಣದ ಅದಿರು

    • ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಅದಿರನ್ನು ಬೇಲೆಕೇರಿ ‘ಪೋರ್ಟ್‌ ಕನ್ಸರ್ವೇಟರ್‌’ನ ಸುಪರ್ದಿಗೆ ನೀಡಲಾಗಿತ್ತು

    • 2010ರ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಬೇಲೆಕೇರಿ ಬಂದರಿನ ಮೂಲಕ ಒಟ್ಟು 11.59 ಲಕ್ಷ ಟನ್‌ ಅದಿರನ್ನು ರಫ್ತು ಮಾಡಲಾಗಿತ್ತು. ಇದರಲ್ಲಿ ಕದ್ದ 6.10 ಲಕ್ಷ ಟನ್‌ ಅದಿರೂ ಸೇರಿತ್ತು

    • 2006ರಿಂದ 2010ರವರೆಗೆ ಈ ಬಂದರಿನಲ್ಲಿ ವಾರ್ಷಿಕ ಸರಾಸರಿ 30 ಲಕ್ಷ ಟನ್‌ ಅದಿರು ರಫ್ತು ಮಾಡಲಾಗಿತ್ತು. ಆದರೆ ಕದ್ದು ರಫ್ತು ಮಾಡುವ ಉದ್ದೇಶದಿಂದ 2010ರ ಏಪ್ರಿಲ್‌–ಮೇ ತಿಂಗಳಿನಲ್ಲೇ 11.59 ಲಕ್ಷದಷ್ಟು ಅದಿರನ್ನು ರಫ್ತು ಮಾಡಲಾಗಿತ್ತು

    • ಈ ಸಂಬಂಧ ಬಂದರು ಅಧಿಕಾರಿಗಳು ಎರಡು ಶಿಪ್ಪಿಂಗ್‌ ಕಂಪನಿಗಳು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.