ADVERTISEMENT

ಬೆಳಗಾವಿ ಚಳಿಗಾಲದ ಅಧಿವೇಶನ | ಗೊಂದಲಕ್ಕೆ ಸಿಲುಕಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 20:01 IST
Last Updated 14 ಸೆಪ್ಟೆಂಬರ್ 2019, 20:01 IST
   

ಬೆಂಗಳೂರು: ಬೆಳಗಾವಿ ಜಿಲ್ಲೆ ಪ್ರವಾಹದಿಂದ ತತ್ತರಿಸಿರುವುದರಿಂದ ಬೆಳಗಾವಿ ಸುವರ್ಣಸೌಧದಲ್ಲಿ ಈ ಬಾರಿ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ರಾಜ್ಯ ಸರ್ಕಾರವೇ ಗೊಂದಲಕ್ಕೆ ಸಿಲುಕಿದೆ.

ಕೇಂದ್ರ ಸರ್ಕಾರ ಈವರೆಗೂ ನೆರೆ ಪರಿಹಾರ ಘೋಷಿಸದೇ ಇರುವ ಕಾರಣ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ಜನರ ಆಕ್ರೋಶವನ್ನು ಎದುರಿಸುವುದು ಕಷ್ಟವಾಗುತ್ತದೆ. ವಿರೋಧ ಪಕ್ಷಗಳು ಇದೇ ಅಸ್ತ್ರವನ್ನು ಬಳಸಿ ಹೋರಾಟ ರೂಪಿಸುವ ಸಾಧ್ಯತೆಯೂ ಇದೆ.

ಅಲ್ಲದೆ, ಪರಿಹಾರ ಕಾರ್ಯದಲ್ಲಿ ನಿರತವಾಗಿರುವ ಆಡಳಿತ ಯಂತ್ರ ಅಧಿವೇಶನದತ್ತ ಮುಖ ಮಾಡಿದರೆ, ಪರಿಹಾರ ಕಾಮಗಾರಿ ಸ್ಥಗಿತಗೊಳ್ಳುತ್ತದೆ ಎಂಬ ಕಾರಣಕ್ಕಾಗಿ ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಚುರುಕು ನೀಡಿದ್ದಾರೆ. ಆದರೆ, ಕೇಂದ್ರದಿಂದ ಗೃಹ ಸಚಿವ ಅಮಿತ್‌ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನೆರೆ ಪೀಡಿತ ಪ್ರದೇಶ ವೀಕ್ಷಣೆ ಮಾಡಿ ಹೋಗಿದ್ದರೂ ಕನಿಷ್ಠ ಮಧ್ಯಂತರ ಪರಿಹಾರವನ್ನೂ ನೀಡಿಲ್ಲ. ಇದರಿಂದ ಜನ ಬೇಸತ್ತಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಜನರ ಆಕ್ರೋಶ ಎದುರಿಸಬೇಕಾಗಬಹುದು’ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರ ಸಭೆಯ ಬಳಿಕ ಕಂದಾಯ ಸಚಿವ ಆರ್‌.ಅಶೋಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ನೆರೆ ಹಾವಳಿಯಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸಾಧ್ಯವಾಗುತ್ತದೆಯೊ ಇಲ್ಲವೋ ಎಂಬುದನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗ ನಡೆಸಲು ಸಾಧ್ಯವಾಗದಿದ್ದರೆ, ಮುಂದೆ ಬೇರೆ ಸಂದರ್ಭದಲ್ಲಿ ನಡೆಸಬೇಕೆ ಎಂಬ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ಪ್ರವಾಹದ ವಿಚಾರಕ್ಕೆ ಮಾತ್ರ ಮುಖ್ಯಮಂತ್ರಿಯವರು ಈ ಸಭೆಯನ್ನು ಕರೆದಿಲ್ಲ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ಕುಂದುಕೊರತೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುವ ಉದ್ದೇಶದಿಂದ ಸಭೆ ನಡೆಸಿದ್ದಾರೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ, ಪುನರ್‌ವಸತಿ ಮತ್ತು ಪರಿಹಾರ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಪೂರ್ಣ ಮಾಹಿತಿ ನೀಡಿದ್ದೇವೆ’ ಎಂದರು.

ಸಭೆಗೆ ಪ್ರಮುಖ ಶಾಸಕರ ಗೈರು

ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಹಿರಿಯ ಶಾಸಕ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಆನಂದ ಮಾಮನಿ ಗೈರಾಗಿದ್ದರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಯಲ್ಲಿ ಪೂರ್ವ ನಿಯೋಜಿತ ಕೆಲಸ ಇದ್ದ ಕಾರಣ ಸಭೆಗೆ ಬರಲಿಲ್ಲ.

ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಉಮೇಶ ಕತ್ತಿ ಅವರು ಅದೇ ಕಾರಣಕ್ಕೆ ಸಭೆಗೆ ಹಾಜರಾಗಿಲ್ಲ. ಅಸಮಾಧಾನ ತಣಿಯದ ಕಾರಣ ಬಂದಿಲ್ಲ ಎಂದೂ ವ್ಯಾಖ್ಯಾನಿಸಲಾಗಿದೆ.

‘ಮುಖ್ಯಮಂತ್ರಿಯವರು ಪಕ್ಷದ ಎಲ್ಲ ಶಾಸಕರಿಗೂ ಆಹ್ವಾನ ನೀಡಿದ್ದರು. ಕೆಲವರು ಪೂರ್ವ ನಿಗದಿತ ಕೆಲಸ ಇದ್ದ ಕಾರಣ, ಬಂದಿಲ್ಲ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.