ಬೆಂಗಳೂರು: ‘ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಸಾವಿಗೀಡಾದ ಘಟನೆಗೆ ಯಾರಾದರೂ ಕಾರಣವಾಗಿದ್ದರೆ ಅಂಥವರ ವಿರುದ್ಧ ಕ್ರಮ ಖಚಿತ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಬಳ್ಳಾರಿಗೆ ಭಾನುವಾರಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಯಾವುದೇ ಅಂಶವನ್ನು ಮುಚ್ಚಿಡುವುದಿಲ್ಲ’ ಎಂದರು.
‘ವಿಮ್ಸ್‌ನಲ್ಲಿ ಇಬ್ಬರು ರೋಗಿಗಳು ಸಾವಿಗೀಡಾದ ಕೂಡಲೇ ಈ ವಿಚಾರಣೆಗೆ ಡಾ. ಸ್ಮಿತಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಮಾಹಿತಿ ಸಂಗ್ರಹಿಸಿದೆ. ಎಲೆಕ್ಟ್ರಿಕ್ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕರೆದೊಯ್ಯಬೇಕೆಂದು ಸಮಿತಿಯವರು ಹೇಳಿದ್ದು, ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲಿ ವರದಿ ಬರಲಿದೆ’ ಎಂದರು.
‘ಯಾವುದೇ ಶಾಸಕರು ಹೇಳಿದಾಕ್ಷಣ ಆಸ್ಪತ್ರೆಗೆ ನಿರ್ದೇಶಕರನ್ನು ನೇಮಿಸಲು ಸಾಧ್ಯವಿಲ್ಲ. ನಿರ್ದೇಶಕ ಸ್ಥಾನಕ್ಕೆ ನೇಮಿಸಲು ಕೆಲವು ನಿಯಮಗಳಿರುತ್ತವೆ. ಅರ್ಹರಾದವರನ್ನು ಮಾತ್ರ ನೇಮಿಸಲಾಗುತ್ತದೆ. ಕರುಣಾಕರ ರೆಡ್ಡಿ, ಸಚಿವ ಬಿ. ಶ್ರೀರಾಮುಲು, ಸಚಿವ ಆನಂದ್ ಸಿಂಗ್ ಎಲ್ಲರೂ ಬಳ್ಳಾರಿಯಲ್ಲಿದ್ದಾರೆ. ಈ ವಿಷಯದಲ್ಲಿ ರಾಜಕಾರಣ ಮಾಡುವವರ ಘನತೆಯೇ ಕಡಿಮೆಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.