ADVERTISEMENT

ಗಡುವು ಮೀರಲಿದೆ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಕೆಲಸ

ನಿರೀಕ್ಷಿತ ವೇಗದಲ್ಲಿ ಸಾಗದ ‘ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆ’ಯ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 0:30 IST
Last Updated 18 ಜೂನ್ 2024, 0:30 IST
   

ನವದೆಹಲಿ: ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ಮೂಲಕ ಹಾದು ಹೋಗುವ ‘ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆ’ಯ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. 10 ಪ್ಯಾಕೇಜ್‌ಗಳ ಕಾಮಗಾರಿಗಳ ಈಗಿನ ಪ್ರಗತಿ ಗಮನಿಸಿದರೆ ಈ ಯೋಜನೆಯು 2025ರ ಜೂನ್‌ಗೂ ಪೂರ್ಣಗೊಳ್ಳುವುದು ಅನುಮಾನ. 

ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಗಳಿಗೆ ಇಳಿಯಲಿದೆ. 

ಈ ಯೋಜನೆಯು 2024ರ ಆರಂಭದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದರು. ಫೆಬ್ರುವರಿಯಲ್ಲಿ ನಡೆದ ಲೋಕಸಭಾ ಅಧಿವೇಶನದಲ್ಲಿ ಗಡ್ಕರಿ, ‘ಈ ಕಾಮಗಾರಿ ಡಿಸೆಂಬರ್‌ಗೆ ಮುಗಿಯಲಿದೆ’ ಎಂದು ಅಭಯ ನೀಡಿದ್ದರು. ‘ಈ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರಗಳ ಸಹಕಾರ ಅಗತ್ಯ. ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಯೋಜನೆಗೆ ನಿರ್ಮಾಣ ಸಾಮಗ್ರಿ ಒದಗಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ಸರ್ಕಾರಗಳು ಸಹಾಯ ಮಾಡಬೇಕು’ ಎಂದು ಕೋರಿದ್ದರು. 

ADVERTISEMENT

ಕರ್ನಾಟಕದಲ್ಲಿ ₹5,465 ಕೋಟಿ ವೆಚ್ಚದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಈವರೆಗೆ ಶೇ 85ರಷ್ಟು ಕಾಮಗಾರಿಗಳು ಮುಗಿದಿವೆ. ಈ ಭಾಗದಲ್ಲಿ ನಾಲ್ಕು ಗ್ರೇಡ್‌ ಸಪರೇಟರ್‌ಗಳು, 15 ಪ್ರಮುಖ ಸೇತುವೆಗಳು, 47 ಸಣ್ಣ ಸೇತುವೆಗಳು, 63 ಅಂಡರ್‌ಪಾಸ್‌ಗಳು, ನಾಲ್ಕು ಟೋಲ್‌ ಪ್ಲಾಜಾಗಳು ಇರಲಿವೆ. ರಾಜ್ಯದ ಮೂರು ಪ್ಯಾಕೇಜ್‌ಗಳು 2024ರ ಮಾರ್ಚ್ ತಿಂಗಳೊಳಗೆ ಮುಗಿಯಲಿವೆ ಎಂದು ಸಚಿವರು ಈ ಹಿಂದೆ ಭರವಸೆ ನೀಡಿದ್ದರು. ‘ರಾಜ್ಯದ ಮೂರು ಪ್ಯಾಕೇಜ್‌ಗಳ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಸಣ್ಣಪುಟ್ಟ ಕಾಮಗಾರಿಗಳಷ್ಟೇ ಬಾಕಿ ಇವೆ. ಒಂದೂವರೆ ತಿಂಗಳೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ’ ಎಂದು ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ತಮಿಳುನಾಡಿನಲ್ಲಿ ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಯು ಶೇ 42ರಿಂದ ಶೇ 55ರಷ್ಟು ಪೂರ್ಣಗೊಂಡಿದೆ. ಆಂಧ್ರ ಪ್ರದೇಶದಲ್ಲಿ ಮೂರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಇಲ್ಲಿ ಬಹಳ ನಿಧಾನಗತಿಯಿಂದ ಕಾಮಗಾರಿ ಸಾಗುತ್ತಿದೆ. ಅರ್ಧದಷ್ಟೂ ಕಾಮಗಾರಿ ಮುಗಿದಿಲ್ಲ. ಆಂಧ್ರ ಪ್ರದೇಶದ ಮೂರು ಪ್ಯಾಕೇಜ್‌ಗಳ ಕೆಲಸಗಳನ್ನು ಮುಗಿಸಲು 2025ರ ಜೂನ್‌ನ ಗಡುವನ್ನು ವಿಧಿಸಲಾಗಿದೆ. ಆದರೆ, ಭೂಸ್ವಾಧೀನ ಕಗ್ಗಂಟು, ಸಮನ್ವಯ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದಾಗಿ ಈ ಗಡುವಿನೊಳಗೆ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.