ADVERTISEMENT

ಕೆಲಸಕ್ಕೆ ಬಾರದ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನಲಷ್ಟೇ ಲಾಯಕ್ಕು: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2022, 8:26 IST
Last Updated 13 ಸೆಪ್ಟೆಂಬರ್ 2022, 8:26 IST
   

ಬೆಂಗಳೂರು: ಕೆಲಸಕ್ಕೆ ಬಾರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರುದೋಸೆ ತಿನ್ನಲಷ್ಟೇ ಲಾಯಕ್ಕು ಎಂದು ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದತೇಜಸ್ವಿ ಸೂರ್ಯ ಅವರು,'ಇನ್‌ಸ್ಟಾಗ್ರಾಂನಲ್ಲಿ ದೋಸೆ ಚಿತ್ರ ನೋಡಿ ಟೆಂಪ್ಟ್‌ ಆಗಿ ದೋಸೆ ತಿನ್ನಲು ಬಂದಿದ್ದೇನೆ' ಎಂದು ಹೇಳುತ್ತಾ ಪದ್ಮನಾಭ ನಗರದ ಹೋಟೆಲ್‌ವೊಂದರಲ್ಲಿ ದೋಸೆ ಸವಿಯುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ರಾಜಧಾನಿ ಬೆಂಗಳೂರಿನಲ್ಲಿ ಕಳೆದ 51 ವರ್ಷಗಳಲ್ಲೇ ದಾಖಲೆ ಪ್ರಮಾಣದ ಮಳೆ ಸುರಿದು, ಜನರು ಸಂಕಷ್ಟಕ್ಕೆ ಸಿಲುಕಿದ್ದ ಹೊತ್ತಿನಲ್ಲಿ ವೈರಲ್‌ ಆದ ಆ ವಿಡಿಯೊವಿಚಾರವಾಗಿ ರಾಜಕೀಯ ಪಕ್ಷಗಳ ನಾಯಕರು ಹಾಗೂ ನಾಗರಿಕರು ಸೂರ್ಯ ಅವರನ್ನು ಕಟುವಾಗಿ ಟೀಕಿಸಿದ್ದರು.

ADVERTISEMENT

ತೇಜಸ್ವಿ ಸೂರ್ಯ ನಡೆಯನ್ನು ಖಂಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ನಗರದ ವಿವಿಧ ರೆಸ್ಟೋರೆಂಟ್‌ಗಳಲ್ಲಿ ತಯಾರಿಸಲಾದ ದೋಸೆಗಳನ್ನು ಸಂಸದ ಕಚೇರಿಗೆ ಕಳುಹಿಸಿಕೊಡುವ ಮೂಲಕ ಸೆ.10 ರಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆ ಸಂದರ್ಭದ ವಿಡಿಯೊ ಹಂಚಿಕೊಂಡಿದ್ದ ಕಾರ್ಯಕರ್ತರೊಬ್ಬರು, 'ತೇಜಸ್ವಿ ಸೂರ್ಯ ಅವರು ಕರ್ತವ್ಯ ನಿರ್ವಹಣೆಯಲ್ಲಿ ತೋರಿದ ಬೇಜವಾಬ್ದಾರಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೇವೆ. ಅವರಿಗೆ ಬೆಂಗಳೂರಿನ ಅತ್ಯುತ್ತಮ ಹೋಟೆಲ್‌ಗಳ ವಿವಿಧ ರೀತಿಯ 10 ದೋಸೆಗಳನ್ನು ಕಳುಹಿಸಿಕೊಟ್ಟಿದ್ದೇವೆ. ಅವರು ಉಚಿತವಾಗಿ ಈ ದೋಸೆಗಳನ್ನು ಪಡೆಯಲಿ. ಹೋಟೆಲ್‌ ಮಾರ್ಕೆಟಿಂಗ್‌ ಬಗ್ಗೆ ಹಾಗೂ ತಮ್ಮ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವ ಬಗ್ಗೆ ಚಿಂತಿಸದಿರಲಿ' ಎಂದು ಚಾಟಿ ಬೀಸಿದ್ದರು.

ಈ ಸಂಬಂಧ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿ ಸೆ.11 ರಂದು ಟ್ವೀಟ್ ಮಾಡಿದ್ದ ಸೂರ್ಯ, ಕಾಂಗ್ರೆಸ್‌ನವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ನನ್ನ ಮನೆಗೆ ಮಸಾಲ ದೋಸೆ ಪಾರ್ಸೆಲ್‌ ಕಳುಹಿಸಿರುವುದಾಗಿ ಹೇಳಿದ್ದರು. 24 ಗಂಟೆ ಕಳೆದರೂ ದೋಸೆ ಬಂದಿಲ್ಲ. ಎಂದಿನಂತೆ ಈ ವಿಚಾರದಲ್ಲೂ ಮೋಸ ಮಾಡಿದ್ದಾರೆ. ಸರಿಯಾಗಿ ದೋಸೆಯನ್ನೇ ಕಳುಹಿಸಲಾಗದಅವರುಉತ್ತಮ ಆಡಳಿತ ನೀಡುವ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದರು.

ಇದೀಗ ಸಂಸದರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, 'ಬೆಳ್ಳಂದೂರಿನಲ್ಲಿ ಜನ ಮುಳುಗಿದರೆ ನಾನೇನು ಮಾಡಲಿ ಎನ್ನುವಕೆಲಸಕ್ಕೆ ಬಾರದ ಸಂಸದ ತೇಜಸ್ವಿ ಸೂರ್ಯಅವರು ನಿರುದ್ಯೋಗಿಯಾಗಿದ್ದಾರೆ.ಕಾಂಗ್ರೆಸ್ ಕಳುಹಿಸಿದ ದೋಸೆಗಾಗಿ 24 ಗಂಟೆ ಬಾಯಲ್ಲಿ ನೀರು ಸುರಿಸಿಕೊಂಡು ಕಾಯುವಷ್ಟುಒಬ್ಬಸಂಸದನಿಗೆ ಪುರುಸೊತ್ತಿದೆ ಎಂದಾದರೆ ಅವರು ದೋಸೆ ತಿನ್ನಲಷ್ಟೇ ಲಾಯಕ್ಕು.ಬಿಟ್ಟಿ ತಿನ್ನೋದಷ್ಟೇ ಬಿಜೆಪಿ ಕಾಯಕವೇ!?' ಎಂದು ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.