ಬೆಂಗಳೂರು: ಟೊಯೊಟಾ ಮೊಬಿಲಿಟಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ‘ಸುಸ್ಥಿರ ನಗರಗಳ ಸವಾಲು’ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿರುವ 10 ನಗರಗಳಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನ ಪಡೆದಿದೆ.
‘ಸುಸ್ಥಿರ ನಗರಗಳ ಸವಾಲು’ ಸ್ಪರ್ಧೆಯು ಜೂನ್‌ನಲ್ಲಿ ಆರಂಭವಾಗಿತ್ತು. ವಿಶ್ವದ 46 ದೇಶಗಳಿಂದ 150ಕ್ಕೂ ಹೆಚ್ಚು ನಗರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಂಚಾರ ವ್ಯವಸ್ಥೆ (ಮೊಬಿಲಿಟಿ) ಸುಧಾರಣೆಗಾಗಿ ಅಳವಡಿಕೊಳ್ಳುವ ಯೋಜನೆಗಳನ್ನು ನಗರಗಳು ಪ್ರಸ್ತುತಪಡಿಸಿದ್ದವು.
ನಗರಗಳು ಸಲ್ಲಿಸಿದ್ದ ಯೋಜನೆಗಳನ್ನು ಪರಿಗಣಿಸಿ ನ.8ರಂದು ಪ್ರಕಟಿಸಲಾಗಿರುವ 10 ನಗರಗಳ ಆಯ್ಕೆ ಪೂರ್ವಪಟ್ಟಿಯಲ್ಲಿ (ಶಾರ್ಟ್‌ಲಿಸ್ಟ್) ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಉತ್ತರ ಪ್ರದೇಶದ ವಾರಾಣಸಿ ನಗರ ಎಂಟನೇ ಸ್ಥಾನದಲ್ಲಿದೆ. ಸೆ.18ರಂದು ಪ್ರವೇಶಕ್ಕೆ ಅಂತಿಮ ದಿನವಾಗಿದ್ದು, ನಂತರ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಂತಿಮವಾಗಿ ಆಯ್ಕೆಯಾಗುವ ಮೂರು ನಗರಗಳಿಗೆ ಪ್ರತಿ ವರ್ಷ ₹25 ಕೋಟಿ ಅನುದಾನವನ್ನು ನೀಡಲಾಗುತ್ತದೆ.
ಸಂಚಾರ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು, ಅಪಘಾತರಹಿತ, ವಾಹನ ಸವಾರರ ಸ್ನೇಹಿ ಸೌಲಭ್ಯ ಕಲ್ಪಿಸುವ ಯೋಜನೆಗಳನ್ನು ಪ್ರಸ್ತುತಪಡಿಸಲಾಗಿತ್ತು. ಸಂಚಾರ ದಟ್ಟಣೆ ನಿರ್ವಹಣೆ, ಮೂಲ ಸೌಕರ್ಯಗಳ ಆಧುನೀಕರಣ, ಅಪಘಾತಗಳ ತಡೆಗಟ್ಟುವ ಸಲುವಾಗಿ ‘ಬ್ರ್ಯಾಂಡ್ ಬೆಂಗಳೂರು - ಸುಗಮ ಸಂಚಾರ ಬೆಂಗಳೂರು’ ವರದಿಯ ಯೋಜನೆಗಳನ್ನೂ ಬೆಂಗಳೂರು ನಗರ ಪ್ರಸ್ತುತಪಡಿಸಿತ್ತು.
ಪಾದಚಾರಿಗಳಿಗೆ, ಸೈಕಲ್ ಬಳಕೆದಾರರಿಗೆ ಸುರಕ್ಷತೆ ಒದಗಿಸುವುದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ನಗರ ಬದ್ಧವಾಗಿದೆ ಎಂದು ಸ್ಪರ್ಧೆಗೆ ಒದಗಿಸಿರುವ ಯೋಜನೆ ಪ್ರಸ್ತಾವದಲ್ಲಿ ಬಿಬಿಎಂಪಿ ತಿಳಿಸಿದೆ.
10 ನಗರಗಳ ಯೋಜನೆಗಳ ಬಗ್ಗೆ ಫೌಂಡೇಷನ್‌ನ ತಜ್ಞರು ವಿಶ್ಲೇಷಣೆ ನಡೆಸಲಿದ್ದಾರೆ. ಯೋಜನೆಗಳ ಕ್ರಿಯಾಯೋಜನೆ, ಅವುಗಳ ಅನುಷ್ಠಾನ, ತಂತ್ರಜ್ಞಾನದ ಅಳವಡಿಕೆ ಸೇರಿದಂತೆ ವಿವಿಧ ಆಯಾಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. 2024ರ ಫೆಬ್ರುವರಿಯಲ್ಲಿ ಅಂತಿಮ ಮೂರು ನಗರಗಳನ್ನು ಪ್ರಕಟಿಸಲಾಗುವುದು ಎಂದು ಫೌಂಡೇಷನ್‌ನ ಕಾರ್ಯಕ್ರಮಗಳ ನಿರ್ದೇಶಕ ರಯಾನ್ ಕ್ಲೆಮ್ ತಿಳಿಸಿದ್ದಾರೆ.
ಶಾರ್ಟ್ ಲಿಸ್ಟ್‌ನಲ್ಲಿರುವ 10 ನಗರಗಳು
1. ಬೆಂಗಳೂರು–ಭಾರತ
2. ಡೆಟ್ರಾಯಿಟ್–ಅಮೆರಿಕ
3. ಫೋರ್ಟಲೀಸಾ–ಬ್ರೆಜಿಲ್
4. ಮೆಡೆಲಿನ್–ಕೊಲಂಬಿಯಾ
5. ಮೆಕ್ಸಿಕೊ ಸಿಟಿ–ಮೆಕ್ಸಿಕೊ
6. ನ್ಯೂ ಓರ್ಲಿಯನ್ಸ್–ಅಮೆರಿಕ
7. ಸೆಬೆರಾಂಗ್ ಪೆರೈ–ಮಲೇಷ್ಯಾ
8. ವಾರಾಣಸಿ–ಭಾರತ
9. ವೆನಿಸ್–ಇಟಲಿ
10. ಯಾರ್ಕ್–ಯುನೈಟೆಡ್ ಕಿಂಗ್‌ಡಮ್
ಸ್ಪರ್ಧೆಯ ಆಶಯಗಳು
ಸಂಚಾರ ವ್ಯವಸ್ಥೆಯನ್ನು ಸಮಗ್ರವಾಗಿ ಉತ್ತಮಗೊಳಿಸುವುದು
ನಿವಾಸಿಗಳು/ ವಾಹನ ಸವಾರರಿಗೆ ಸುರಕ್ಷತೆ ಒದಗಿಸುವುದು
ಸಂಚಾರ ವ್ಯವಸ್ಥೆಯಲ್ಲಿ ಸುಸ್ಥಿರತೆಯನ್ನು ಉತ್ತಮಗೊಳಿಸಿ ಇಂಗಾಲ ಹೊರಸೂಸುವಿಕೆ ಮತ್ತು ಪರಿಸರದ ಮೇಲಿನ ನಕಾರಾತ್ಮಕ ಪರಿಣಾಮವನ್ನು ಕಡಿಮೆಗೊಳಿಸುವುದು
ಪ್ರಸ್ತುತ ಕೈಗೊಂಡಿರುವ ಕ್ರಮಗಳಿಂದ ಸಂಚಾರ ಸಮಸ್ಯೆ ಪರಿಹಾರವಾಗಿಲ್ಲ. ಹೀಗಾಗಿ ವಿವಿಧ ರೀತಿಯ ಪ್ರಯತ್ನ ಹಾಗೂ ಆವಿಷ್ಕಾರದ ಯೋಜನೆಗಳಿಂದ ಪರಿಹಾರ ಕಂಡುಕೊಳ್ಳಬೇಕು.
ಬೆಂಗಳೂರಿಗೆ ತಜ್ಞರ ತಂಡ: ‘ಸುಸ್ಥಿರ ನಗರಗಳ ಸವಾಲು’ ಸ್ಪರ್ಧೆಯಲ್ಲಿ ಸುಗಮ ಸಂಚಾರಕ್ಕೆ ಬೆಂಗಳೂರು ಅಳವಡಿಸಿಕೊಳ್ಳುವ ಯೋಜನೆಗಳ ಮಾಹಿತಿ ವಿಶ್ಲೇಷಣೆ ಹಾಗೂ ಸಲಹೆಗಳನ್ನು ನೀಡಲು ಟೊಯೊಟಾ ಮೊಬಿಲಿಟಿ ಫೌಂಡೇಷನ್ ತಜ್ಞರ ತಂಡ ಬೆಂಗಳೂರಿಗೆ ಬರಲಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಹೇಳಿದರು ‘ನ.13ರಿಂದ 15ರವರೆಗೆ ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಯೋಜನೆಯ ವಿನ್ಯಾಸ ಸಮಸ್ಯೆ ನಿರ್ವಹಣೆ ಬಗ್ಗೆ ತಜ್ಞರೊಂದಿಗೆ ನಗರದ ಪ್ರತಿನಿಧಿಗಳು ಭಾಗವಹಿಸಬೇಕಿತ್ತು. ದೀಪಾವಳಿ ಸಂದರ್ಭವಾಗಿದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಸ್ಥೆಯ ತಂಡ ಬೆಂಗಳೂರಿಗೆ ನ.21ರಂದು ಬರುತ್ತಿದ್ದು ನಮ್ಮ ನಗರದೊಂದಿಗೆ ವಾರಾಣಸಿ ನಗರದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದೆ. ಅಂತಿಮವಾಗಿ ಮೂರು ನಗರಗಳಲ್ಲಿ ಬೆಂಗಳೂರು ಆಯ್ಕೆಯಾದರೆ ಸಂಚಾರ ವ್ಯವಸ್ಥೆಯ ಆಧುನೀಕರಣಕ್ಕೆ ಟೊಯೊಟಾ ಮೊಬಿಲಿಟಿ ಫೌಂಡೇಷನ್ ಮುಂದಿನ 5 ವರ್ಷಗಳವರೆಗೆ ಅನುದಾನ ನೀಡಲಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.