ಹಾಸನ: ಸಕಲೇಶಪುರ–ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಭೂಕುಸಿತದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಗುರುವಾರ ಯಶವಂತಪುರ–ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ. ಈ ಮೂಲಕ ಬೆಂಗಳೂರು–ಮಂಗಳೂರು ನಡುವಿನ ರೈಲು ಸಂಚಾರ ಪುನರಾರಂಭವಾಗಿದೆ.
ಕಡಗರವಳ್ಳಿ ಮತ್ತು ಯಡಕುಮೇರಿ ನಡುವಿನ ರೈಲು ಮಾರ್ಗದ ಕೆಳಬದಿಯಲ್ಲಿ ಭೂಕುಸಿತವಾಗಿದ್ದು, ರೈಲು ಸಂಚಾರ ಸ್ಥಗಿತವಾಗಿತ್ತು. ನಿರಂತರ ಮಳೆಯ ನಡುವೆಯೂ ಕ್ರಿಬ್ ಗೋಡೆ, ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗಿದೆ.
ಆಗಸ್ಟ್ 4 ರಂದು ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ರೈಲಿನ ಎಂಜಿನ್ ಓಡಿಸುವ ಮೂಲಕ ಸುರಕ್ಷತೆ ಪರಿಶೀಲಿಸಲಾಯಿತು. ಆಗಸ್ಟ್ 6 ರಂದು ಪೂರ್ಣ ಸಾಮಗ್ರಿ ಹೊತ್ತ ಗೂಡ್ಸ್ ರೈಲು ಈ ಮಾರ್ಗದಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಸದ್ಯಕ್ಕೆ ಈ ಸ್ಥಳದಲ್ಲಿ ರೈಲಿನ ವೇಗದ ಮಿತಿಯನ್ನು 15 ಕಿ.ಮೀ. ನಿಗದಿಗೊಳಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರೈಲು ಮಾರ್ಗವನ್ನು ತ್ವರಿತಗತಿಯಲ್ಲಿ ದುರಸ್ತಿ ಮಾಡಿರುವುದಕ್ಕೆ ನೈರುತ್ಯ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ, ಉಪ ಮಹಾಪ್ರಬಂಧಕ ಕೆ.ಎಸ್. ಜೈನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.