ADVERTISEMENT

ಬೆಂಗಳೂರು: ನೂತನ ಹೆರಿಗೆ ಆಸ್ಪತ್ರೆ ನಿರ್ಮಿಸಲು ಸಿಎಂಗೆ ಶಾಸಕ ಸೋಮಶೇಖರ್ ಮನವಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 16:12 IST
Last Updated 20 ಆಗಸ್ಟ್ 2023, 16:12 IST
ಎಸ್‌.ಟಿ.ಸೋಮಶೇಖರ್
ಎಸ್‌.ಟಿ.ಸೋಮಶೇಖರ್   

ಬೆಂಗಳೂರು: ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಾಗಿರುವ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಿದರು.

ಕೆಂಗೇರಿ ಹೋಬಳಿಯಲ್ಲಿ ಸಣ್ಣ ಹೆರಿಗೆ ಆಸ್ಪತ್ರೆ ಇದ್ದು ಜನಸಂಖ್ಯೆಗೆ ಅನುಗುಣವಾಗಿ ನೂತನವಾಗಿ ಹೆರಿಗೆ ಆಸ್ಪತ್ರೆ ನಿರ್ಮಿಸಲು ಸರ್ ಎಂ.ವಿಶ್ವೇಶ್ವರಯ್ಯ 2 ನೇ ಬ್ಲಾಕ್‌ ಬಡಾವಣೆಯಲ್ಲಿ ಬಿಡಿಎ ವತಿಯಿಂದ 3,432 ಚ.ಮೀ.ನಷ್ಟು ಸಿ.ಎ ನಿವೇಶನ ಮಂಜೂರಾಗಿದೆ. ಆದರೆ, ಹೆರಿಗೆ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿ ಮುಂದಾಗಿಲ್ಲ ಎಂದು ಸೋಮಶೇಖರ್‌ ಹೇಳಿದರು.

ಹೆರಿಗೆ ಆಸ್ಪತ್ರೆ ಇಲ್ಲದಿರುವುದರಿಂದ ಹೆಣ್ಣು ಮಕ್ಕಳು ನಗರದ ಕೇಂದ್ರ ಭಾಗದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಗೆ ತೆರಳುವಂತಾಗಿದೆ. ವಾಣಿ ವಿಲಾಸ ಆಸ್ಪತ್ರೆ ದೂರವಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ₹1 ಲಕ್ಷದವರೆಗೆ ಬಿಲ್‌ ಪಾವತಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಕೆಂಗೇರಿ ಭಾಗದಲ್ಲಿ ತುರ್ತಾಗಿ ಹೆರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಬಿಬಿಎಂಪಿಗೆ ಆದೇಶ ನೀಡಬೇಕೆಂದು ಅವರು ಮನವಿ ಮಾಡಿದರು.

ADVERTISEMENT

ಅಲ್ಲದೇ, ಕೆಂಗೇರಿ ಉಪನಗರದಲ್ಲಿರುವ ಎಲ್‌ಸಿ10 ರಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಆಗುತ್ತಿರುವುದರಿಂದ ಮೇಲ್ಸೇತುವೆ ನಿರ್ಮಿಸುವಂತೆ ಮೈಲಸಂದ್ರ ಮತ್ತು ಕೆಂಗೇರಿ ಉಪನಗರದ ನಿವಾಸಿಗಳ ಒತ್ತಾಸೆಯಾಗಿದೆ. ಮೇಲ್ಸೇತುವೆ ನಿರ್ಮಾಣದ ಕುರಿತು ಸಮೀಕ್ಷೆ ನಡೆಸಿ ವರದಿ ತಯಾರಿಸಿದ್ದು, ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆಯೂ ಸೋಮಶೇಖರ್‌ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.