ADVERTISEMENT

ಪೊಲೀಸರು ಎಚ್ಚರ ತಪ್ಪಿದ್ದರೆ ಹಾದಿ ತಪ್ಪುತ್ತಿದ್ದ ಪ್ರಕರಣ: ಬಿ.ದಯಾನಂದ

‘ನನಗೆ ಇರೋದು 140/90 (ಬಿ.ಪಿ) ಒತ್ತಡ ಮಾತ್ರ’: ಬಿ.ದಯಾನಂದ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಬಿ.ದಯಾನಂದ 
ಬಿ.ದಯಾನಂದ    

ಬೆಂಗಳೂರು: ‘ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯೇಕ ತಂಡಗಳು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿವೆ. ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಎಂಬ ನಿಟ್ಟಿನಲ್ಲಿ ಪೊಲೀಸ್‌ ತನಿಖೆ ಸಾಗುತ್ತಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ತಿಳಿಸಿದರು.

‘ಪ್ರಕರಣ ಗಂಭೀರತೆಯಿಂದ ಕೂಡಿದ್ದು, ಸೆಲೆಬ್ರಿಟಿಯೊಬ್ಬರು ಆರೋಪಿ ಆಗಿದ್ದಾರೆ. ವಿಜಯನಗರದ ಎಸಿಪಿಗೆ ತನಿಖಾ ಹೊಣೆ ವಹಿಸಲಾಗಿದೆ. ಅವರಿಗೆ ಅಗತ್ಯ ಸಿಬ್ಬಂದಿ ಒದಗಿಸಲಾಗಿದೆ. ಬೆಂಗಳೂರು, ಚಿತ್ರದುರ್ಗ, ಮೈಸೂರಿನಲ್ಲಿ ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿವೆ. ವಿಧಿವಿಜ್ಞಾನ ತಜ್ಞರು, ತಾಂತ್ರಿಕ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ತನಿಖೆ ನಡೆಸಲಾಗುತ್ತಿದೆ. ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಅವರು ತನಿಖೆ ಉಸ್ತುವಾರಿ ವಹಿಸಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಇದುವರೆಗೂ 17 ಮಂದಿಯನ್ನು ಬಂಧಿಸಲಾಗಿದೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಪ್ರಕರಣ ಬೇರೆ ದಾರಿ ಹಿಡಿಯುತ್ತಿತ್ತು. ಸಿಬ್ಬಂದಿ ಕಾರ್ಯ ಶ್ಲಾಘನೀಯ. ತನಿಖೆ ವಿವರವನ್ನು ಈಗಲೇ ಹೇಳಲು ಆಗುವುದಿಲ್ಲ. ತನಿಖೆಯ ಭಾಗವಾದ ಹಾಗೂ ಸಂಬಂಧವಲ್ಲದ ಕೆಲವು ಅಂಶಗಳು ಮಾಧ್ಯಮಗಳಲ್ಲಿ ವರದಿ ಆಗುತ್ತಿವೆ. ಎಲ್ಲರೂ ತಾಳ್ಮೆಯಿಂದ ಸಹಕರಿಸಿದರೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

ಕೊಲೆ ಪ್ರಕರಣ ಸಂಬಂಧ ಯಾರದ್ದಾದರೂ ಒತ್ತಡವಿತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಇರೋದು 140/90 ಒತ್ತಡ ಮಾತ್ರ (ಬಿ.ಪಿ). ಅದು ನಾರ್ಮಲ್‌’ ಎಂದು ಹೇಳಿದರು. ‌

‘ನನ್ನ ಮೇಲೆ ಯಾರೂ ಒತ್ತಡ ಹಾಕಿಲ್ಲ. ಸೂಕ್ಷ್ಮ ಪ್ರಕರಣವಾಗಿದ್ದರಿಂದ ಜಾಗೃತೆಯಿಂದ ತನಿಖೆ ನಡೆಸಲಾಗುತ್ತಿದೆ’ ಎಂದು ಉತ್ತರಿಸಿದರು.

ಆರೋಪಿಗಳಿಗೆ ಶಿಕ್ಷೆಯಾಗುವ ರೀತಿಯಲ್ಲಿ ಪುರಾವೆಗಳನ್ನು ಕಲೆ ಹಾಕುವ ಮೂಲಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು.
–ಬಿ.ದಯಾನಂದ ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.