ADVERTISEMENT

ಬೆಂಗಳೂರು ಮಳೆ: ಐಟಿ ಕಂಪನಿಗಳಿಗೆ ಭಾರಿ ನಷ್ಟ;ಮೂಲಸೌಕರ್ಯ ಸುಧಾರಣೆಗೆ ಡಿಕೆಶಿ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2022, 10:02 IST
Last Updated 4 ಸೆಪ್ಟೆಂಬರ್ 2022, 10:02 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಭಾರಿ ಮಳೆಯಿಂದಾಗಿ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳು (ಒಆರ್‌ಆರ್‌ಸಿಎ) ₹225 ಕೋಟಿ ನಷ್ಟ ಅನುಭವಿಸಿವೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಒಆರ್‌ಆರ್‌ಸಿಎ, ನಗರದಲ್ಲಿ ಮೂಲಸೌಕರ್ಯ ಸುಧಾರಣೆಯಾಗದಿದ್ದಲ್ಲಿ ಬೆಂಗಳೂರು ಬಿಟ್ಟು ಹೋಗುವುದು ಅನಿವಾರ್ಯವೆನಿಸಲಿದೆ ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಮೂಲಸೌಕರ್ಯ ತ್ವರಿತವಾಗಿ ಸುಧಾರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳು ಮೂಲಸೌಕರ್ಯ ಕೊರತೆಯಿಂದಾಗಿ ₹225 ಕೋಟಿ ನಷ್ಟ ಅನುಭವಿಸಿರುವುದಾಗಿ ಸಿಎಂಗೆ ಪತ್ರ ಬರೆದಿವೆ. ಹಾಗೆಯೇ ರಾಜ್ಯ ತೊರೆಯುವ ಮತ್ತೊಂದು ಎಚ್ಚರಿಕೆ ನೀಡಿವೆ. ಇದರಿಂದ ರಾಜ್ಯ ರಾಜಧಾನಿಯಲ್ಲಿ ಮತ್ತಷ್ಟು ನಿರುದ್ಯೋಗ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.

ಬೆಂಗಳೂರು ಇಂದು ಐಟಿ‌‌‌ ರಾಜಧಾನಿಯಾಗಿ ಗುರುತಿಸಿಕೊಳ್ಳಲು ಕೆಂಪೇಗೌಡ ಅವರ ಕೊಡುಗೆ ಬಹಳಷ್ಟಿದೆ. ಆದರೆ ಬಿಜೆಪಿ ಸರ್ಕಾರ ಹಣದಾಸೆಗೆ ಪ್ರತೀ ಕಾಮಗಾರಿಯಲ್ಲೂ ಶೇ 40 ಕಮಿಷನ್ ಪಡೆಯುವ ಮೂಲಕ ಬೆಂಗಳೂರಿನ ಮೂಲಸೌಕರ್ಯಗಳನ್ನು 3ನೇ ದರ್ಜೆಗೇರಿಸಿದೆ. ಹೊರ ರಾಜ್ಯಗಳು ಇದರ ಲಾಭ ಪಡೆಯುವ ಮುನ್ನ ಬೆಂಗಳೂರಿನ ಮೂಲಸೌಕರ್ಯ‌ ತ್ವರಿತವಾಗಿ ಸುಧಾರಿಸಬೇಕು ಎಂದು ಹೇಳಿದ್ದಾರೆ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಪ್ರಯಾಣಿಕರು ಸೇರಿದಂತೆ ನೌಕರರಿಗೆ ಅತೀವ ತೊಂದರೆ ಎದುರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.