ADVERTISEMENT

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಬಂಧಿತರಿಗೆ ‘ಅಲ್‌– ಉಮ್ಮಾ’ ಸಂಘಟನೆ ನಂಟು

ಸಂತೋಷ ಜಿಗಳಿಕೊಪ್ಪ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
<div class="paragraphs"><p>ಮುಸಾವೀರ್ ಹುಸೇನ್ ಶಾಜೀಬ್ ಮತ್ತು ಅಬ್ದುಲ್ ಮಥೀನ್ ಅಹ್ಮದ್ ತಾಹಾ</p></div>

ಮುಸಾವೀರ್ ಹುಸೇನ್ ಶಾಜೀಬ್ ಮತ್ತು ಅಬ್ದುಲ್ ಮಥೀನ್ ಅಹ್ಮದ್ ತಾಹಾ

   

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿರುವ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾ, ನಿಷೇಧಿತ ‘ಅಲ್‌–ಉಮ್ಮಾ’ ಭಯೋತ್ಪಾದನಾ ಸಂಘಟನೆಯ ಸದಸ್ಯರ ಜೊತೆ ನಂಟು ಹೊಂದಿದ್ದರೆಂಬ ಅನುಮಾನ ವ್ಯಕ್ತವಾಗಿದೆ.

‘ತೀರ್ಥಹಳ್ಳಿಯ ತಾಹಾ ಹಾಗೂ ಮುಸಾವೀರ್, ಅಲ್‌–ಉಮ್ಮಾ ಸಂಘಟನೆಯ ರೂವಾರಿಗಳ ಜೊತೆ ಸಂಪರ್ಕದಲ್ಲಿದ್ದರೆಂಬ ಮಾಹಿತಿ ಇದೆ. ಇದೇ ಸಂಘಟನೆ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಸಂಗತಿ ಈ ಹಿಂದಿನ ಕೆಲ ಪ್ರಕರಣಗಳಲ್ಲಿ ಗೊತ್ತಾಗಿತ್ತು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

ADVERTISEMENT

ಕರ್ನಾಟಕಕ್ಕೆ ವಿಸ್ತರಣೆ: ‘ಇಸ್ಲಾಮಿಕ್ ಸ್ಟೇಟ್ (ಐಎಸ್‌) ಸಂಘಟನೆ ಉಗ್ರರ ಜೊತೆ ನಂಟು ಹೊಂದಿದ್ದ ತಮಿಳುನಾಡಿನ ಶಂಕಿತ ಸೈಯದ್ ಅಹಮದ್ ಬಾಷಾ, ‘ಅಲ್‌–ಉಮ್ಮಾ’ ಸಂಘಟನೆ ಕಟ್ಟಿದ್ದ. ಹಿಂದೂ ಮುಖಂಡರ ಹತ್ಯೆ, ಕೋಮು ಗಲಭೆ ಹಾಗೂ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶ ಸಂಘಟನೆಯದ್ದಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಮುಸ್ಲಿಂ ಸಮುದಾಯದ ಯುವಕರನ್ನು ಪ್ರಚೋದಿಸಿ, ಸಂಘಟನೆಗೆ ಸೇರಿಸಲಾಗಿತ್ತು. ಇವರ ಮೂಲಕವೇ 2014ರಲ್ಲಿ ಚೆನ್ನೈ ಅಂಬತ್ತೂರಿನಲ್ಲಿ ಹಿಂದೂ ಸಂಘಟನೆಯ ಮುಖಂಡ ಸುರೇಶ್ ಕುಮಾರ್ ಹತ್ಯೆ ಮಾಡಿಸಲಾಗಿತ್ತು. ಈ ಪ್ರಕರಣದಲ್ಲಿ ತಮಿಳುನಾಡು ಕಡಲೂರಿನ ಖ್ವಾಜಾ ಮುಹಿನುದ್ದೀನ್ ಅಲಿಯಾಸ್ ಜಲಾಲ್ ಮತ್ತು ಆತನ ಸಹಚರರು ಸಿಕ್ಕಿಬಿದ್ದಿದ್ದರು. ಆಗಲೇ, ‘ಅಲ್‌–ಉಮಾ’ ಹೆಸರು ಮುಂಚೂಣಿಗೆ ಬಂದಿತ್ತು. ಇದಾದ ಕೆಲ ವರ್ಷಗಳಲ್ಲಿ ಕರ್ನಾಟಕಕ್ಕೂ ಸಂಘಟನೆ ಕಾಲಿಟ್ಟಿತ್ತು. ಜೊತೆಗೆ, 2020ರ ಜನವರಿ 9ರಂದು ತಮಿಳುನಾಡಿನಲ್ಲಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್ ವಿಲ್ಸನ್ ಹತ್ಯೆಯಲ್ಲೂ ಸಂಘಟನೆ ಪಾತ್ರವಿತ್ತು’ ಎಂದು ಹೇಳಿವೆ.

‘ಖ್ವಾಜಾ ಮುಹಿನುದ್ದೀನ್, ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರಲಾರಂಭಿಸಿದ್ದ. ಬೆಂಗಳೂರಿನ ಗುರಪ್ಪನಪಾಳ್ಯ ಹಾಗೂ ಇತರೆ ಸ್ಥಳಗಳಲ್ಲಿ ಸಭೆ ನಡೆಸಲಾರಂಭಿಸಿದ್ದ. ಇದೇ ಸಭೆಯಲ್ಲಿ ಗುರಪ್ಪನಪಾಳ್ಯದ ಮೆಹಬೂಬ್ ಪಾಷಾ, ಮೊಹಮ್ಮದ್ ಹನೀಫ್, ಮೊಹಮ್ಮದ್ ಮನ್ಸೂರ್ ಅಲಿ ಖಾನ್, ನಾಯಂಡಹಳ್ಳಿಯ ಇಮ್ರಾನ್ ಖಾನ್, ಕೋಲಾರದ ಸಲೀಂ ಖಾನ್, ಚನ್ನಪಟ್ಟಣದ ಹನೀಸ್, ರಾಮನಗರದ ಅಜಾಜ್ ಪಾಷಾ, ತೀರ್ಥಹಳ್ಳಿಯ ಅಬ್ದುಲ್ ಮಥೀನ್ ಅಹಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜೀಬ್ ಪಾಲ್ಗೊಳ್ಳುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಸಿಮ್‌ ಸುಳಿವು, ಕಬಾಬ್ ಅಂಗಡಿಯಿಂದ ಪರಾರಿ: ‘ಖ್ವಾಜಾ ಮುಹಿನುದ್ದೀನ್, ನಕಲಿ ದಾಖಲೆ ಕೊಟ್ಟು ಖರೀದಿಸುತ್ತಿದ್ದ ಸಿಮ್‌ ಕಾರ್ಡ್‌ಗಳನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ತರುತ್ತಿದ್ದ. ಅವುಗಳನ್ನು ಸಹಚರರಿಗೆ ಹಂಚುತ್ತಿದ್ದ. ಅದೇ ಸಿಮ್ ಕಾರ್ಡ್ ಬಳಸುವಂತೆ ಸೂಚಿಸುತ್ತಿದ್ದ. ಸಿಮ್‌ಕಾರ್ಡ್ ಬಗ್ಗೆ ತಮಿಳುನಾಡು ಪೊಲೀಸರು, ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗುರಪ್ಪನಪಾಳ್ಯದಲ್ಲಿದ್ದ ಮನೆ ಮೇಲೆ 2020ರ ಜನವರಿ 10ರಂದು ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಮೆಹಬೂಬ್‌ ಪಾಷಾ ಸೇರಿ ಹಲವರನ್ನು ಬಂಧಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ತಾಹಾ ಹಾಗೂ ಮುಸಾವೀರ್, ಬಾಲ್ಯ ಸ್ನೇಹಿತರು. ದಾಳಿ ಸಂದರ್ಭದಲ್ಲಿ ಇವರಿಬ್ಬರು ಸಿಕ್ಕಿರಲಿಲ್ಲ. ಅವರಿಬ್ಬರು ಕಬಾಬ್ ಮಾರಾಟ ಅಂಗಡಿಯಲ್ಲಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲೇ ಅವರಿಬ್ಬರು ಪರಾರಿಯಾಗಿದ್ದರು. ಅಂದಿನಿಂದ ಅವರಿಬ್ಬರಿಗಾಗಿ ಹುಡುಕಾಟ ನಡೆದಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ನಂತರವೇ ಅವರಿಬ್ಬರು ಸಿಕ್ಕಿಬಿದ್ದಿದ್ದಾರೆ. ಆರಂಭದಲ್ಲಿ ಅಲ್‌–ಉಮಾ ಜೊತೆ ಗುರುತಿಸಿಕೊಂಡಿದ್ದ ಇವರಿಬ್ಬರು, ಬೇರೆ ಭಯೋತ್ಪಾದನಾ ಸಂಘಟನೆ ಜೊತೆಗೂ ಒಡನಾಟ ಹೊಂದಿ ಕೃತ್ಯ ಎಸಗಿರುವ ಅನುಮಾನವಿದೆ. ವಿಚಾರಣೆಯಿಂದಲೇ ಮತ್ತಷ್ಟು ಮಾಹಿತಿ ತಿಳಿಯಬೇಕಿದೆ’ ಎಂದು ತಿಳಿಸಿವೆ.

ಕಡಲೂರಿನಲ್ಲಿದ್ದ ಶಂಕಿತರು: ‘ಮುಸಾವೀರ್ ಹಾಗೂ ತಾಹಾ, ಕೇರಳ, ದೆಹಲಿ, ನೇಪಾಳ, ಪಶ್ಚಿಮ ಬಂಗಾಳದಲ್ಲಿ ಸುತ್ತಾಡುತ್ತಿದ್ದರು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಸಂದರ್ಭದಲ್ಲಿ ಇವರಿಬ್ಬರು ತಮಿಳುನಾಡಿನ ಕಡಲೂರಿನಲ್ಲಿದ್ದರು. ಇದು, ಖ್ವಾಜಾ ಮುಹಿನುದ್ದೀನ್ ನೆಲೆಸಿದ್ದ ಊರು. ಹೀಗಾಗಿ, ಅಲ್‌–ಉಮಾ ಸಂಘಟನೆ ಕೈವಾಡವಿರುವ ಅನುಮಾನ ದಟ್ಟವಾಗಿದೆ’ ಎಂದು ಮೂಲಗಳು ಹೇಳಿವೆ.

‘ಕಡಲೂರಿನಲ್ಲಿಯೇ ಶಂಕಿತರು ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದರೆಂಬ ಮಾಹಿತಿ ಇದೆ. ಮುಸಾವೀರ್, ಬಾಂಬ್ ಸಮೇತ ಚೆನ್ನೈ ಮೂಲಕ ಬೆಂಗಳೂರಿಗೆ ಬಂದಿದ್ದ. ಕೆಫೆಯಲ್ಲಿ ಬಾಂಬ್ ಇರಿಸಿ, ಬಳ್ಳಾರಿ ಹಾಗೂ ಕಲಬುರಗಿ ಮಾರ್ಗವಾಗಿ ಹೈದರಾಬಾದ್‌ಗೆ ಹೋಗಿದ್ದ. ಅಲ್ಲಿಯೇ ಅಬ್ದುಲ್ ಮಥೀನ್ ಜೊತೆಯಾಗಿದ್ದ. ನಂತರ, ಅವರಿಬ್ಬರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದರು. ಇವರಿಬ್ಬರು, 20ಕ್ಕೂ ಹೆಚ್ಚು ಸಿಮ್ ಕಾರ್ಡ್ ಬಳಸಿದ್ದರು. ಇವರಿಂದ ಕೆಲ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘₹ 80 ಲಕ್ಷಕ್ಕೂ ಹೆಚ್ಚು ನಗದು ಸಂದಾಯ’

‘ಐಎಸ್‌ ಉಗ್ರರ ಜೊತೆ ಅಬ್ದುಲ್ ಮಥೀನ್ ಸಂಪರ್ಕದಲ್ಲಿದ್ದ. ಈತನ ಎಲ್ಲ ಕೆಲಸಕ್ಕೆ ಮುಸಾವೀರ್ ಜೊತೆಯಲ್ಲಿದ್ದ. ಕೊಯಮತ್ತೂರು ಕಾರು ಬಾಂಬ್ ಸ್ಫೋಟ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಶಿವಮೊಗ್ಗ ಟ್ರಯಲ್ ಬಾಂಬ್ ಸ್ಫೋಟ ಮಂಗಳೂರು ಗೋಡೆ ಬರಹ ಪ್ರಕರಣದಲ್ಲೂ ಇವರಿಬ್ಬರ ಪಾತ್ರವಿತ್ತು’ ಎಂದು ಮೂಲಗಳು ಹೇಳಿವೆ. ‘ನಾಲ್ಕು ವರ್ಷಗಳ ಅವಧಿಯಲ್ಲಿ ಅಬ್ದುಲ್ ಮಥೀನ್‌ಗೆ ಹಲವರು ₹ 80 ಲಕ್ಷಕ್ಕೂ ಹೆಚ್ಚು ನಗದು ಸಂದಾಯ ಮಾಡಿರುವ ಮಾಹಿತಿ ಇದೆ. ಕೆಫೆ ಸ್ಫೋಟದ ನಂತರ ಪರಾರಿಯಾಗಿದ್ದ ಸಂದರ್ಭದಲ್ಲಿ ಎಲ್ಲ ಖರ್ಚುಗಳನ್ನು ತಾಹಾ ನೋಡಿಕೊಂಡಿದ್ದ. ಎಲ್ಲ ಕಡೆಯೂ ಆತನೇ ಹಣ ನೀಡಿದ್ದ. ಪಾಕಿಸ್ತಾನ ಹಾಗೂ ದುಬೈನಿಂದ ಹಣ ಬಂದಿರುವ ಅನುಮಾನವಿದ್ದು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿವೆ.

‘ನಿವೃತ್ತ ಯೋಧನ ಮಗ’

‘ತಾಹಾ ನಿವೃತ್ತ ಯೋಧರೊಬ್ಬರ ಮಗ. ಎಂಜಿನಿಯರಿಂಗ್ ಪದವೀಧರ. ಪುಸ್ತಕ ಹಾಗೂ ವಿಡಿಯೊಗಳಿಂದ ಪ್ರಚೋದನೆಗೊಂಡಿದ್ದ. ಭಯೋತ್ಪಾದನಾ ಕೃತ್ಯಗಳಿಗೆ ಈತನೇ ಮೊದಲಿಗೆ ಸಂಚು ರೂಪಿಸುತ್ತಿದ್ದ’ ಎಂದು ಮೂಲಗಳು ಹೇಳಿವೆ. ‘ತಾಹಾ ತಂದೆ 22 ವರ್ಷ ಭಾರತೀಯ ಸೇನೆಯಲ್ಲಿದ್ದರು. ಹಲವು ವರ್ಷಗಳ ಹಿಂದೆಯೇ ಮನೆ ತೊರೆದಿದ್ದ ತಾಹಾ ವಾಪಸು ಹೋಗಿರಲಿಲ್ಲ. ಮಗ ಎಲ್ಲಿದ್ದಾನೆಂಬ ಮಾಹಿತಿಯೂ ಪೋಷಕರಿಗೆ ಗೊತ್ತಿರಲಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಂದೆ 2023ರಲ್ಲಿ ತೀರಿಕೊಂಡಿದ್ದರು. ಅಂತ್ಯಕ್ರಿಯೆಗೂ ಈತ ಮನೆಗೆ ಹೋಗಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.